ಈ ಮರ್ತ್ಯ ಧೂಳಿಯಲಿ ಹುಟ್ಟಿಬೆಳೆದೆವು ನಾವು
ಈ ಧೂಳಿಯಲಿ ದೃಷ್ಟಿ ಕುರುಡಾಯಿತು|
ಈ ಮಣ್ಣಿನಲಿ ನಾವು ಮಕ್ಕಳಂತಾಡಿದೆವು
ಅಭಯವನು ನೀಡಯ್ಯ ದಿವ್ಯಗುರುವೆ||
ನಮ್ಮ ಏನೋ ಒಂದು ಅಲ್ಪ ತಪ್ಪಿಗೆ ನೀನು
ನಿನ್ನ ಮಡಿಲಿಂದಾಚೆ ನೂಕಲಿಹೆಯಾ|
ನೀನೆ ನಮ್ಮನ್ಮು ತಳ್ಳಿ ಅನಾಥರಂದದಲಿ
ತೊಳಲಿಸುವೆಯಾ ನಮ್ಮ ಬಳಲಿಸುವೆಯಾ||
ಹೇ ಪ್ರಭುವೆ ಹಾಗೆಂದಿಗೂ ಗೈಯಬೇಡ
ನಮ್ಮನೆಂದಿಗು ಆಚೆ ನೂಕಬೇಡ|
ನಾವು ಅಲ್ಪರು ಗುರುವೆ, ಸಿಟ್ಟಾಗದಿರು ಪ್ರಭುವೆ
ಮೃದುನುಡಿಯೊಳೆಮ್ಮೊಡನೆ ಮಾತನಾಡು||
ನಿನ್ನೆದುರು ನಾವೆಲ್ಲ ಬರಿಯ ಹಸುಳೆಗಳಯ್ಯ
ಹೆಜ್ಜೆಹೆಜ್ಜೆಗು ಎಡವಿ ಬೀಳುತಿಹೆವು|
ಇದನರಿತರೂ ನೀನು ರುದ್ರಮುಖ ಭ್ರುಕುಟಿಯೊಳು
ನಮ್ಮನೇತಕೆ ಇಂತು ನಡುಗಿಸುತಿಹೆ||
ನೂರು ಸಲ ನೀನೆತ್ತಿ ನಿಲ್ಲಿಸಿದರೂ ಕೂಡ
ನೂರು ಸಲ ಬೀಳುವುದು ನಮ್ಮ ಪಾಡು |
ಇಂಥ ದುರ್ಬಲಮತಿಯ ಕರುಣದಿಂದಲಿ ನೋಡು
ಮೃದುನುಡಿಯೊಳೆಮ್ಮೊಡನೆ ಮಾತನಾಡು||
——–ವಚನವೇದ