ಈ ಮತ್ರ್ಯಧೂಳಿಯಲಿ ಹುಟ್ಟಿಬೆಳೆದೆವು ನಾವು
ಈ ಧೂಳಿಯಲಿ ದೃಷ್ಟಿ ಕುರುಡಾಯಿತು |
ಈ ಮಣ್ಣಿನಲಿ ನಾವು ಮಕ್ಕಳಂತಾಡಿದೆವು
ಅಭಯವನು ನೀಡಯ್ಯ ದಿವ್ಯಗುರುವೆ ||
ನಮ್ಮ ಏನೋ ಒಂದು ಅಲ್ಪ ತಪ್ಪಿಗೆ ನೀನು ನಿನ್ನ ಮಡಿಲಿಂದಾಚೆ ನೂಕಲಿಹೆಯಾ |
ನೀನೆ ನಮ್ಮನು ತಳ್ಳಿ ಅನಾಥರಂದದಲಿ ತೊಳಲಿಸುವೆಯಾ ನಮ್ಮ ಬಳಲಿಸುವೆಯಾ ||
ಹೇ ಪ್ರಭುವೆ ಹಾಗೆಂದಿಗೂ ಗೈಯಬೇಡ ನಮ್ಮನೆಂದಿಗು ಆಚೆ ನೂಕಬೇಡ |
ನಾವು ಅಲ್ಪರು ಗುರುವೆ, ಸಿಟ್ಟಾಗದಿರು ಪ್ರಭುವೆ ಮೃದುನುಡಿಯೊಳೆಮ್ಮೊಡನೆ ಮಾತನಾಡು ||
ನಿನ್ನೆದುರು ನಾವೆಲ್ಲ ಬರಿಯ ಹಸುಳೆಗಳಯ್ಯ ಹೆಜ್ಜೆ ಹೆಜ್ಜೆಗು ಎಡವಿ ಬೀಳುತಿಹೆವು |
ಇದನರಿತರೂ ನೀನು ರುದ್ರಮುಖ ಭ್ರುಕುಟಿಯೊಳು ನಮ್ಮನೇತಕೆ ಇಂತು ನಡುಗಿಸುತಿಹೆ ||
ನೂರು ಸಲ ನೀನೆತ್ತಿ ನಿಲ್ಲಿಸಿದರೂ ಕೂಡ ನೂರು ಸಲ ಬೀಳುವುದು ನಮ್ಮ ಪಾಡು
ಇಂಥ ದುರ್ಬಲಮತಿಯ ಕರುಣದಿಂದಲಿ ನೋಡು
ಮೃದುನುಡಿಯೊಳೆಮ್ಮೊಡನೆ ಮಾತನಾಡು ||
-ವಚನವೇದ