ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ
ಗೋಪೀಜನಪ್ರಿಯ ಗೋಪಾಲಗಲ್ಲದೆ||
ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು|
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯಾ
ಗುರುವುತನದಲಿ ನೋಡೆ ಜಗದಾದಿಗುರುವು||
ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ|
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯಾ
ಆವ ಧೈರ್ಯದಿ ನೋಡೆ ಅಸುರಾಂತಕನು||
ಗಗನದಲಿ ಸಂಚರಿಪ ಗರುಢದೇವನೆ ತುರಗ
ಜಗತೀಧರ ಶೇಷ ಪರ್ಯಂಕಶಯನ|
ನಿಗಮಗೋಚರ ನಮ್ಮ ಪುರಂದರವಿಟ್ಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೇ||
—ಪುರಂದರದಾಸ