ಇನಿತಾದರೂ ನಿನಗೆ ಮತಿಯಿಲ್ಲವೇ ಮನವೆ|
ಹೀನಾಯ ಮಾಡದಿರು ಪರದೋಷಗಳನೆಣಿಸಿ||
ಅವನ ಬಯ್ಯುವೆ ಯಾಕೆ ಅವನ್ಯಾರು ನೀನ್ಯಾರು
ಅವನ ಪಾಪಕೆ ನೀನು ಭಾಗಿಯಾದೆ|
ಅವನು ಉತ್ತಮನಾದರವನು ಬದುಕಿದ ಕಾಣೊ
ಅವ ಪುಣ್ಯ ಮಾಡಿದರೆ ಅವನ ಕುಲ ಉದ್ಧಾರ||
ನೀನು ಪಡೆವುದರಲ್ಲಿ ಬೇಡಬಂದವನಲ್ಲ
ನಿನಗು ಅವನಿಗು ಏನು ಸಂಬಂಧವೊ|
ಮನೆ ಒಡವೆ ವಸ್ತ್ರಗಳ ಭಾಗ ಕೇಳುವುದಿಲ್ಲ
ಕ್ಷಣಕ್ಷಣಕೆ ಸಂದೇಹ ಮಾಡಿಕೊಂಬುದು ಸಲ್ಲ||
ನಿನ್ನ ಗತಿ ಮಾರ್ಗಕ್ಕೆ ಅವ ನಡೆದು ಬರುವನೇ
ನಿನ್ನಿಂದ ಪರಲೋಕ ಅವಗೆ ಉಂಟೆ|
ನಿನ್ನೊಳಗೆ ನೀ ತಿಳಿದು ಶ್ರೀವಿಜಯವಿಟ್ಠಲನ್ನ
ಸನ್ನುತಿಸಿ ಭವರೋಗವನು ಕಳೆದುಕೊಳ್ಳಯ್ಯ||
—–ವಿಜಯದಾಸ