ಅಲ್ಲಿ ನೋಡಲು ರಾಮ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮಚಂದ್ರ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು|
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ಶ್ರೀರಾಮಚಂದ್ರ ಜಗವೆಲ್ಲ ತಾನಾದ||

ಇವನಿಗೆ ಅವ ರಾಮ ಅವನಿಗೆ ಇವ ರಾಮ
ಅವನಿಯೊಳೀ ಪರಿ ರೂಪವುಂಟೇ|
ಲವಮಾತ್ರದಿ ಅಸುರರ್ ದುರುಳತನದಿ ಕೂಡಿ
ಅವರವರ್ಹೊಡೆದಾಡಿ ಹತರಾಗಿ ಪೋದರು ||

ಹನುಮದಾದಿಗಳು ಇವನನಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ |
ಕ್ಷಣದಲಿ ಪರಂದರವಿಟ್ಠಲರಾಯನು
ಕೊನೆಗೊಬ್ಬನಾಗಿಯೇ ರಣದಲಿ ನಿಂದ||

                                            ——ಪುರಂದರದಾಸ

Leave a Comment

Your email address will not be published. Required fields are marked *