ಅಲ್ಲಿದೆ ನಮ್ಮನೆ

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ||

ಕದ ಬಾಗಿಲಿರಿಸಿದ ಕಳ್ಳಮನೆ —ಇದು
ಮುದದಿಂದ ಲೋಲಾಡೊ ಸುಳ್ಳುಮನೆ|
ಇದಿರಾಗಿ ವೈಕುಂಠವಾಸ ಮಾಡುವಂಥ
ಪದುಮನಾಭನ ದಿವ್ಯ ಬದುಕು ಮನೆ||

ಮಾಳಿಗೆ ಮನೆಯೆಂದು ನೆಚ್ಚಿ ಕೆಡಲಿಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ|
ನಾಳೆ ಯಮದೂತರು ಬಂದೆಳೆದೊಯ್ವಾಗ
ಮಾಳಿಗೆ ಮನೆಯು ಸಂಗಡ ಬಾರದಯ್ಯ||

ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಲಿ ನಡೆಯದಿರು|
ಒಡೆಯ ಶ್ರೀ ಪುರಂದರವಿಟ್ಠಲನ ಚರಣವ
ದೃಢಭಕ್ತಿಯಲಿ ನೀ ಭಜಿಸೆಲೊ ಮನುಜನೆ||

                                                 —–ಪುರಂದರದಾಸ

 

Leave a Comment

Your email address will not be published. Required fields are marked *