ಅರಿವುವಿಡಿದು, ಅರಿವನರಿದು, ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ,
ಮರಹುವಿಡಿದು, ಮರಹ ಮರೆದು, ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ.
ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು, ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ. ನಿ
ಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ.