ಅನ್ಯಚಿಂತೆಯ ಪಥದಿ

ಅನ್ಯಚಿಂತೆಯ ಪಥದಿ ಮನವಲೆದು ಸಾಗಿರಲು
ನಿನ್ನ ದರ್ಶನ ನನ್ನ ನಾಚಿಸಿಹುದು ||

ಜೀವನದ ಜಲಧಿಯಲಿ ಪಯಣಗೈಯುವ ನನಗೆ
ನೀನೊಂದು ಧ್ರುವತಾರೆ ನನ್ನ ಗುರುವೆ|
ಕಡೆಯಿಲ್ಲದೀ ಕಡಲ ಬಳಸುದಾರಿಯೊಳಾನು
ದಿಕ್ಕು ತಪ್ಪದೆ ಇನ್ನು ಪಯಣಗೈವೆ||

ಇಲ್ಲಿ ನಾನಲೆವಾಗ ಎಂದಾದರೂ ನನ್ನ
ಎದೆಯು ಮಿಡುಕಾಡುತಿರೆ ನೋವಿನಲ್ಲಿ|
ಮೇಲೆ ನಿನ್ನಯ ಕರುಣಕಾಂತಿಯುಜ್ವಲ ತಾರೆ
ಬೆಳಗಿ ಸಂತೈಸುವುದು ಹಾದಿಯಲ್ಲಿ||

ನನ್ನಂತರಂಗದಲಿ ನಿನ್ನ ಮುಖವೆಂದಿಗೂ
ಚಿರಮಧುರ ಕಾಂತಿಯಲಿ ಶೋಭಿಸಿಹುದು|
ಒಂದೆ ಚಣ ನಾ ನಿನ್ನ ಕಾಣದಿದ್ದರೆ ಎದೆಯು
ಅತುಲ ವೇದನೆಯಲ್ಲಿ ತುಡಿಯುತಿಹುದು||

                                                             —–ವಚನವೇದ

Leave a Comment

Your email address will not be published. Required fields are marked *