ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ
ತೋರಯ್ಯ ನಿನ್ನ ದಯ ತೋಯಜಾಂಬಕನೆ
ದುರುಳರ ತರಿವಂಥ ವರಚಕ್ರಧಾರಿ
ಪರಮಾತ್ಮ ಪರಬೊಮ್ಮ ಪರರಿಗುಪಕಾರಿ||1||
ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ
ತರಳ ಪ್ರಹ್ಲಾದನ್ನ ವೈರಿಯ ಮುರದಿ ||2||
ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ
ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ||3||
ಅನಂತನಾಮನೆ ನಿನ್ನ ಅನಂತ ಸದ್ಗುಣವ
ನೆನೆವರಿಗೊಲಿವಂಥ ಪವಮಾನನೀಶಾ ||4||
ಅಜಭವಾಧಿಪ ನೀನು ವಿಜಯಸಾರಥಿಯೇ
ತ್ರಿಜಗವಂದಿತ ಈಶ ವಿಜಯವಿಠ್ಠಲನೇ ||5||