ನೋಡಿದೆ ನಾ ನೋಡಿದೆ
ಮೂಡಲಗಿರಿಯ ವಾಸನ ಯಾತ್ರಿಯ
ಮಾಡಿದೆ ನಾ ಮಾಡಿದೆ
ಬೆಟ್ಟವ ಕಂಡೆನು ಸೋಪಾನಂಗಳು
ನಿಟ್ಟುಸುರಿಕ್ಕದೆ ಏರಿದೆ ಕಟ್ಟ
ಕಡಿಯಣ ಗೋಪುರ ಶಿಖರ
ದಿಟ್ಟಿಸಿ ಕಣ್ಣಿಲಿ ನೋಡಿದೆ ||1||
ಈ ಸಮಸ್ತರ ಗುರುವಾದ ಭಾರತಿ
ಈಶನ ಪಾದಕ್ಕೆ ಎರಗಿದೆ
ಕ್ಲೇಶನ ಕಳೆದು ಎದುರಾಗಿ ಪೊಳೆವ
ಶ್ರೀಶನ ಮಹದ್ವಾರ ನೋಡಿದೆ ||2||
ಬಲವಾಗಿ ಬಂದು ಸ್ವಾಮಿ ಪುಷ್ಕರಣಿ
ಒಳಗೆ ವರಹನ ನೋಡಿದೆ
ಜಲದಲಿ ಮಿಂದು ವೇಗದಲಿ ತಿರುವೆಂ
ಗಳ ದೇವನ ನೋಡ ಸಾಗಿದೆ ||3||
ಗುಡಿಯ ಪೊಕ್ಕೆನು ಗರುಡಗಂಬದ
ಸಡಗರವನು ನಾ ನೋಡಿದೆ
ಒಡನೆ ಪ್ರಾಣಾಚಾರದವರು
ಪಡೆದ ವರಗಳ ಕೇಳಿದೆ ||4||
ಮುನ್ನ ಅವಸರ ಮನಿಯೊಳಗೆ
ಅನ್ನಪೂರ್ಣಿಯ ನೋಡಿದೆ
ಚನ್ನಾಗಿ ಮಂಟಪದೊಳು ಶ್ರೀನಿವಾ
ಸನ್ನ ಮೂರುತಿಯ ನೋಡಿದೆ ||5||
ತೊಟ್ಟಲ ತೀರ್ಥವ ಕೊಂಡು ಪ್ರಸಾದ
ಇಟ್ಟು ಮಾರುವದು ನೋಡಿದೆ
ಇಷ್ಟ ಭಕ್ತರು ಸಮ್ಮುಖದಲಿ
ಮುಟ್ಟಿ ಪಾಡುವದು ನೋಡಿದೆ||6||
ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮ
ಸ್ಕಾರವನು ಮಾಡಿದೆ
ಭೋರನೆ ಕಟಾಂಜನದ ಫಲ್ಗುಣಿ ಬಂ
ಗಾರ ಬಾಗಿಲವ ನೋಡಿದೆ ||7||
ಇಂದು ರವಿ ಶತಕೋಟಿ ತೇಜದ
ಇಂದಿರೇಶನ ಪಾದಾರ
ವಿಂದ ಯುಗ್ಮವ ಪುಳಕೋತ್ಸಹÀದಿಂದ
ಸಂದರುಶನ ನಾ ಮಾಡಿದೆ ||8||
ಇಟ್ಟಿದ್ದ ಅಂದಿಗೆ ಉಟ್ಟ ಪೀತಾಂಬರ
ಕಟ್ಟಿದ್ದ ಧಟ್ಟಿ ವಢ್ಯಾಣ
ಝಟಿ ಕಂಕಣಾಕಾರದಾಲಾಯುಧ
ಇಟ್ಟ ಕಸ್ತೂರಿಯ ನೋಡಿದೆ ||9||
ಮಾಸದಾ ಪೂವು ಪೂಸಿದ ಗಂಧ
ಭೂಷಣಾ ನಾನಾ ಪರಿವಿಧ
ಏಸು ಬಗೆಯಲ್ಲಿಟ್ಟು ಶ್ರೀನಿ
ವಾಸನ ಶೃಂಗಾರ ನೋಡಿದೆ ||10||
ಜಯಜಯ ಜಗದೀಶ ಜಗನ್ನಿವಾಸ
ಜಯ ಜಯ ಲಕುಮಿ ಪರಿತೋಷ
ಜಯ ಜಯ ವಿನಾಶ ಜಯ ಜಯ ಸರ್ವೇಶ
ಜಯವೆಂದು ಸ್ತೋತ್ರವ ಮಾಡಿದೆ||11||
ಕೇಸಕ್ಕಿ ದಧ್ಯೋದನ ಪರಮಾನ್ನ
ದೋಶಿ ಬಿಸಿಬಿಸಿ ಮನೋಹರ
ಲೇಸಾಗಿ ಚತುರ್ವಿಧ ಪ್ರಸಾದವನ್ನು
ಈಸು ಅವಸರ ನೋಡಿದೆ ||12||
ಕರ್ಪೂರದಾರತಿ ವಪ್ಪಿನಿಂದಲಿ ತಂದು
ತಪ್ಪದಲಿ ಬೆಳಗೋದು ನೋಡಿದೆ
ರೆಪ್ಪೆಯವಿ ಹಾಕದೆ ಮನದಣಿಯ ತಿ
ಮ್ಮಪ್ಪನ ವಿಗ್ರಹ ನೋಡಿದೆ ||13||
ಹಿಮಋತು ಪ್ರಥಮ ಮಾಸÀ ದಶಮಿ
ಹಿಮಕರ ವಾರದದಿನದಲ್ಲಿ
ಕ್ರಮದಿಂದಲಿ ಪೋಗಿ ಬಿಂಬ ಮೂರುತಿಯ
ವಿಮಲ ಚಾರಿತ್ರವ ನೋಡಿದೆ ||14||
ಶತ ಅಪರಾಧವ ಮಾಡಲು ಕಳೆದು
ಗತಿಯನೀವ ಇಂದಿರಾ
ಪತಿ ವಿಜಯವಿಠ್ಠಲ ಪುರಂದರನ ಸಂ
ಗತಿಯಲ್ಲಿ ಸತತ ಸಾಕಿದಾ||15||