ದಾಶರಥ ಪಾದಸರಸಿಜ ಮಧುಕರ
ಸಮೀರಜ ಹನುಮ ಎನ್ನ ಪ್ರಾಣಾಪದಕಾ
ಶಿರಸನಾ ಮಗಗೊಲಿದು ರಾಮಚಂದ್ರನ
ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ
ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ
ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ
ಧರಿಸುವೆನು ರಿಪುನಿಕರ ಮಾರೀ||1||
ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ
ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ
ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ
ಸಂಗರಕೆ ಬಂದ ವಿಕಾರಿಗಳ ನೋಡಿ
ಭಂಗಬಡಿಸಿದೆ ಅವರ ಬಲವೆಲ್ಲ ತೂರಿ ||2||
ಸಭೆಯೊಳಗೆ ರಾವಣನ ರಕ್ತವನೆ ಕಾರಿಸಿದೆ
ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ
ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ
ಅಬುಧಿಯನು ವೇಗ ಬಂಧಿಸಿದೆ
ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ ||3||
ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ
ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ
ನೀ ತಡೆಯದೆ ಪೋಗಿ ಮೈರಾವಣನ ಮುರಿದೆ
ಕೋತಿಗಳೊಳಗೆ ನೀ ಮೆರೆದೆ ವೇದ
ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ ||4||
ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ
ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ
ವಾಲಯದಲಿ ಮಾಡಿ ವೈರಿದಳವನು ಗೆಲುವಾ
ಕಾಳಗದೊಳು ನಿನ್ನ ಬಲವ ಕೊಂಡಾಡಿದವರು
ಮೂಲೋಕದೊಳಗೆ ಸವಿಯದು ಬಲು ಚೆಲುವಾ ||5||
ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ
ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ
ಸತತದಲಿ ಕಾಪಾಡು ಎನುತ ಪಾದವ ಪಿಡಿದೆ
ಮತಿಯಲಿಡು ಎಂದು ಬೇಡಿದೆ ಅಭಯವ
ಚತುರ ಫಲದಾಯಕನೆ ದಯಮಾಡು ಬಿಡದೆ ||6||
ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ
ಇಂಪಾಗಿ ಮಾಡುವ ಅಂಜನೆಯನಂದನಾ
ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ
ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ||7||