ಜೋ ಜೋ ಹರಿ ಜಾಹ್ನವಿ ಜನಕ
ಮೂಜಗತ್ಪತಿ ಸುರಕುಲ ಸನಕಾ
ದೀಜನ ಮನೋಹರ ಮಾಣಿಕ್ಯ ಕನಕಾ
ವೈಜಯಂತಿ ಹಾರ ಪಾವನ್ನ ಪದಕ
ಕೇಶಿಭಂಜನ ವ್ಯೋಮಕೇಶ ವಂದಿತ ಪಾದ
ಕ್ಲೇಶನಾಶನ ವಾತೇಶನ ಜನಕ
ಕೇಶರಿರುಹ ಮುಂಜಿಕೇಶನೆ ಕುಂಕುಮ
ಕೇಸರಿಭೂಷಣ ಕೇಶವ ಶೌರಿ ||1||
ವಾರುಣಿ ಪತಿನುತ ವಾರುಣನ ಭಯ ನಿ
ವಾರಣಾ ವಾರಣಾಶಿ ಪುರದರಸೆ
ವಾರಣ ನಗರಿಯ ವಾರನಹತಪಲ್ಲ
ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ ||2||
ಮಾದೇವಿ ರಮಣ ಭೂಮಿದೇವಿ ಉದ್ಧಾರ
ಮಾಧುರ್ಯ ವಚನ ಉಮಾದೇವಿ ವಿನುತಾ
ಮಾಧಾರ ಮಹಶೂರ ಮತ್ಕುಲನೆ ಪ್ರೇ
ಮಾದವನನೆ ಹರಿ ಮಾಧವ ರಾಯಾ ||3||
ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ
ಗೋವುಗಳ ಕಾಯಿದ ಗೋವಳರಾಯಾ
ಗೋವರ್ಧನುದ್ಧಾರ ಗೋ ವಿಪ್ರ ಸಂರಕ್ಷ
ಗೋವಿದಾಂಪತಿ ರಂಗ ಗೋವಿಂದ ನಂದ ||4||
ಮಧುಕೈಟಭಾಸುರ ಮದಗರ್ವ ಮರ್ದನ
ಮದನ ಜನಕ ನಿತ್ಯ ಮಧುರನ್ನ ಪಾನಾ
ಮಧುರಾಪುರ ಪಾಲ ಮದಗಜ ಹರಣಾ ಶಾ
ಮದವರ್ಣ ಶರೀರ ಮಧುಸೂದನನೆ ||5||
ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ
ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ
ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ
ವಿಷ್ಣು ಸರ್ವೋತ್ತಮ ವಿಶ್ವನಾಟಕನೆ||6||
ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ
ವಿಕ್ರಮನಾಗಿ ಕಾಲಕ್ರಮಣಿ ಮಾಡೆ
ಶಕ್ರಮರ್ಚಿಸೆ ಅನುಕ್ರಮನಾಗಿ ಪ
ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ ||7||
ವಾಮಲೋಚನೆಯರ ವಾಮನ ಕೆಡಿಸಿದೆ
ವಾಮನವಾಶಿಷ್ಟವಾ ಮುನಿವಂದ್ಯ
ವಾಮನದಲಿ ದಾನವಾಮನ್ಯಗಳರನ್ನು ಅ
ವಮಾನ ಮಾಡಿದೆ ಸಿರಿವಾಮನನೆ ||8||
ಶ್ರೀಧರ ರಮಣನೆ ಶೃಂಗಾರ ವಾರಿಧಿ
ಶ್ರೀಧನ ಸಂಪತ್ತಾಶ್ರಿತ ಜನರಿಗೆ
ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ
ಶ್ರೀದೇವಿ ಉರಭೂಷಾ ಶ್ರೀಧರನಂತಾ ||9||
ಋಷಿಕೇಶನ ತಾತ ಋಷಿಜನ ಸಂಪ್ರೀತ
ಋಷಿಕುಲೋದ್ಭವ ಪುರುಷ ರಾಮ ಮಹಾ
ಋಷಿನಾಮಧೇಯನೆ ಋಷಿಪತ್ನಿ ಪಾಲನೆ
ಋಷಿಗಳ ಒಡೆಯನೆ ಹೃಷಿಕೇಶ ದೇವ ||10||
ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ
ಪದುಮನಾಭಿಯಲ್ಲಿ ಪದುಮಜನ ಪೆತ್ತ
ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ
ಪದುಮ ಮಿಗಲು ಕಾಂತಿ ಪದುಮನಾಭನೆ||11||
ಧಾಮನಿಧಿಕುಲನು ಧಾಮನೆ ನಿರುತ ತ್ರಿ
ಧಾಮನಿವಾಸ ಸುಧಾಮನ ಮಿತ್ರ
ಧಾಮ ಪುಣ್ಯಧಾಮ ಭಕ್ತ ಹೃದ್ವನಜ
ಧಾಮ ಮಧುಕರನೆ ದಾಮೋದರ ಧರ್ಮಾ ||12||
ಶಂಖ ಸುರಾಹರಾ ನಿಃಶಂಕ ಚರಿತ
ಶಂಖಪಾಣಿ ಶಶಾಂಕ ಸುವದನ
ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ
ಸಂಕರುಷಣನುವುಜ ಸಂಕರುಷಣನೆ ||13||
ಪ್ರದ್ಯೋತ ಶತತೇಜ ಪ್ರಧಾನ ಮೂರುತಿ
ಪ್ರದ್ವೀಪ ವರ್ಣ ಸುಪ್ರದಾಯಕನೆ
ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ
ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ||14||
ವಾಸುವಾನುಜ ಶ್ರೀನಿವಾಸ ಪುಂಡ್ರೀಕ
ವಾಸುದೇವನ ಶಮನಪುರದಲ್ಲಿ
ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ
ವಾಸುದೇವ ವಾಸುದೇವ ||15||
ಅನುಗಾಲವು ನಿನ್ನ ಅನುಸರಿಸಿದೆ ನಾನು
ಅನುಕೂಲವಾಗಿ ಎನ್ನನು ಸಾಕುವುದು
ಅನುಮಾನವ್ಯಾತಕೆ ಅನಿಮಿತ್ತ ಬಂಧು
ಅನುಪಮ ಚರಿತನೆ ಅನಿರುದ್ಧ ಶ್ರೀಶಾ ||16||
ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ
ಪುರುಷೇಶ್ವರ ತತ್ಪುರುಷಾದಿ ಪುರುಷ
ಪುರುಷ ಬೀಜ ವೇದ ಪುರುಷ ಪರಮ
ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ ||17||
ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ
ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ
ಅಕ್ಷಯ ಪಾತ್ರಿಯ ಶಾಖಾದಳವನ್ನು
ಅಕ್ಷಯ ಮಾಡಿದಧೋಕ್ಷಜ ಚಕ್ರಿ ||18||
ನರಸಖ ನರಹರಿ ನಾರಾಯಣ ವಾ
ನರ ದಳನಾಯಕ ನಾರದ ವಿನುತ
ನರಕ ಉದ್ಧಾರಕ ನರಕಾಂತಕ ಕಿ
ನ್ನರ ಸುರನರೋರಗ ವೃಂದ ನರಸಿಂಹ ||19||
ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ
ಸಚ್ಚರಾಚರದೊಳೂ ಗುಣಪರಿಪೂರ್ಣ
ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ
ಸಚ್ಚೂತ ಚುತಿ ದೂರ ಚಿನ್ಮಯ ರೂಪಾ ||20||
ಜನನ ಮರಣ ನಾಶ ಜನನಾದಿಕರ್ತಾಂ
ಜನಸುತಗತಿ ಪ್ರೇಮಾಂಜನ ಗಿರಿಧಾಮ
ಜನಕವರದ ಸಜ್ಜನರಘದಹನ ದು
ರ್ಜನರ ಕುಲರಾತಿ ಜನಾರ್ದನನೆ ||21||
ವೀಂದ್ರವಾಹನ ಮಹೇಂದ್ರಧಾರನೆ ಗ
ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ
ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ
ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ ||22||
ಹರಿ ಎನುತಾ ಹರಿ ಹರಿದು ಓಡಿ ಬರೆ
ಹರಿದು ಪೋಗಿ ಪರಿಹರಿಸಿದ ಖಳನ
ಹರಿ ಹರಿಯು ನಲಿವನೆ ಹರಿರೂಪ ಪರಿ
ಹರಿನಾಮವೆ ಗತಿ ಹರಿ ಸರ್ವೋತ್ತಮಾ||23||
ಕೃಷ್ಣದ್ವಯಪಾಯನ ಉತ್ಕoಷ್ಟ ಮುನೇಶ
ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ
ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ
ಕೃಷ್ಣಾವತಾರ ಕೃಷ್ಣ ಕಮಲೇಶ ||24||
ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ
ನಿನ್ನೊಳಗೆ ನೀನು ಬೀಯ ಬೀಜವನು
ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ
ಭಕ್ತರ ವರದ ಬಾಲ ಗೋಪಾಲ ಜೋ ಜೋ ||25||