ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ
ಜಯ ಮಂಗಳವನೀಯೆ ಜಯ ನಮ್ಮ ಕಾಯೆ
ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ-
ಕಮಲವನು ತೊಳೆಯಲಾವೇಗದಿಂದ
ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ
ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ||1||
ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ
ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ
ಭುವನದೊಳಗೀರೈದು ನೂರು ಯೋಜನದಗಲ
ತವಕದಿಂದಲಿ ಧುಮುಕಿ ಚತುರ ಭಾಗವಾದೆ ||2||
ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ
ಭವದೊರೆ ಭಗೀರಥಗೆ ವಲಿದು ಬರುತ
ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ
ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ ||3||
ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ
ಕುಲಕೋಟಿ ಪಾವನವು ಸಂದೇಹವಿಲ್ಲ
ಸಲಿಲವನು ಸ್ಮರಿಸಿ ಮಜ್ಜನ ಪಾನ ಮಾಡಿದಗೆ
ಪೊಳೆಗೆ ವೈಕುಂಠಪುರ ಅವನ ಹೃದಯದಲಿ ||4||
ದೇಶದೇಶಗಳಿಂದ ಬಂದ ಸುಜನರ ಪಾಪ
ನಾಶನವ ಮಾಳ್ಪ ನೀ ನಿಷ್ಕಾಮದಿ
ಕಾಶಿಸ್ಥ ಬಿಂದು ಮಾಧವ ವಿಜಯವಿಠ್ಠಲನ
ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ ||5||