ಏನೆಲವೊ ದೇವ ವೈಕುಂಠನಾಥಾ
ನೀ ನಾರಿ ವೇಷವನು ಧರಿಸಿದ ಬಗೆ ಪೇಳೋ
ದೈತ್ಯರುರುಬಿಗೆ ದೇವ ತತಿಗಳು ತಲ್ಲಣಿಸಿ
ಮಿತ್ರ ಭಾವದ ಅವರ ಕೂಡಲಿಟ್ಟು
ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು
ಮಿತ್ರವೇಷ ಧರಿಸಿ ಸುರರ ಸಲಹಿದಾ ಬಗೆಯೊ ||1||
ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ ಕ
ರವನಿಡುವೆನೆಂದು ಬರಲಾಗಲೂ
ಅವನೀಶ ಭವಹರ ಕೇಶವ ನೀನೆ ಗತಿ ಎನಲೂ
ಯುವತಿ ವೇಷವಧರಿಸಿ ಶಿವನ ಸಲುಹಿದ ಬಗೆಯೊ||2||
ಅಂದು ಮಾಡಿದ ಚರಿತೆ ಭಕ್ತಜನರು ಬಂದು
ಒಂದು ದಿನ ನೋಡಿದವರಲ್ಲವೆಂದೂ
ಇಂದು ಸತಿ ವೇಷವನು ಧರಿಸಿ ತೋರಿಸಿದೆಯೊ
ಪುರಂದರದಾಸರಿಗೆ ಒಲಿದ ವಿಜಯವಿಠ್ಠಲ ಚೆಲುವಾ ||3||