ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ಕು- |
ಮಾರ ಮೌನದಲಿದ್ದಿ ಮಾತನಾಡಯ್ಯಾ
ಇಂದಿರಾ ಭೂದೇವಿ ಆಳಿದವನೊ |
ನಂದ ಗೋಕುಲದಲ್ಲಿ ಪುಟ್ಟಿದವನೊ ||
ಮಂದಿರ ವೈಕುಂಠ ಶ್ರೀನಿವಾಸನೊ | ಕರಿ – |
ಬಂಧನ ವಿನಾಶದ ವಿಠ್ಠಲನೊ ||1||
ಅಂಬರೀಷನ ಶಾಪ ಪರಿಹರನೊ |
ಶಂಭು ಮೊರೆಯಿಡಲು ಕಾಯಿದವನೊ ||
ಕಂಭದಿಂದೊಡೆದು ಬಂದವನೊ | ತ್ರಿ –
ಯಂಬಕನ ಭಕ್ತನ ಸಂಹರನೊ ||2||
ಬೆರಳಲ್ಲಿ ಬೆಟ್ಟವನೆತ್ತಿದವನೊ |
ದುರುಳ ಕಾಳಿಂಗನ ತುಳಿದವನೊ ||
ಒರಳನು ಕಾಲಲ್ಲಿ ಎಳೆದವನೊ |
ಚೆಲ್ವ ಸಿರಿ ವಿಜಯವಿಠ್ಠಲರಾಯನೊ ||3||