ಆಚಾರವಿಲ್ಲದ ನಾಲಿಗೆ

ಆಚಾರವಿಲ್ಲದ ನಾಲಿಗೆ| ನಿನ್ನ
ನೀಚ ಬುದ್ಧಿಯ ಬಿಡು ನಾಲಿಗೆ|
ವಿಚಾರವಿಲ್ಲದೆ ಪರರ ದೂಷಿಪುದಕೆ
ಚಾಚಿಕೊಂಡಿರುವಂಥ ನಾಲಿಗೆ||

ಪ್ರಾತಃಕಾಲದೊಳೆದ್ದು ನಾಲಿಗೆ| ಸಿರಿ-
ಪತಿಯೆನ್ನಬಾರದೆ ನಾಲಿಗೆ|
ಪತಿತಪಾವನ ನಮ್ಮ ರತಿಪತಿಜನಕನ
ಸತತವು ನುಡಿ ಕಂಡ್ಯ ನಾಲಿಗೆ||

ಚಾಡಿ ಹೇಳಲಿಬೇಡ ನಾಲಿಗೆ| ನಿನ್ನ
ಬೇಡಿಕೊಂಬೆನು ಕಂಡ್ಯ ನಾಲಿಗೆ|
ರೂಢಿಗೊಡೆಯ ಶ್ರೀರಾಮನ ಪಾದವ
ಪಾಡುತಲಿರು ಕಂಡ್ಯ ನಾಲಿಗೆ||

ಹರಿಯನ್ನೆ ಸ್ಮರಿಸಯ್ಯ ನಾಲಿಗೆ| ನರ-
ಹರಿಯನ್ನೆ ಭಜಿಸಯ್ಯ ನಾಲಿಗೆ|
ವರದ ಪುರಂದರವಿಟ್ಠಲರಾಯನ
ಚರಣವ ನುತಿಸಯ್ಯ ನಾಲಿಗೆ||

                                          —-ಪುರಂದರದಾಸ

Leave a Comment

Your email address will not be published. Required fields are marked *