ಬಲ್ಲಿದ ಹಗೆಯವ ತೆಗೆವನ್ನಬರ,

ಬಲ್ಲಿದ ಹಗೆಯವ ತೆಗೆವನ್ನಬರ, ಬಡವರ ಹರಣ ಹಾರಿಹೋದ ತೆರನಂತಾಯಿತ್ತು. ನೀ ಕಾಡಿ ಕಾಡಿ ನೋಡುವನ್ನಬರ, ಎನಗಿದು ವಿಧಿಯೇ ಹೇಳಾ ತಂದೆ ? ಮುರುವಾರುವನ್ನಬರ, ಎಮ್ಮೆ ಗಾಳಿಗೆ ಹಾರಿಹೋದ ತೆರನಂತಾಯಿತ್ತು. ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ ಚೆನ್ನಮಲ್ಲಿಕಾರ್ಜುನಾ ?

ಬಲ್ಲಿದ ಹಗೆಯವ ತೆಗೆವನ್ನಬರ, Read More »

ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ.

ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ. ಅಣ್ಣಾ, ನಾನು ಹೆಂಗೂಸಲ್ಲ ; ಅಣ್ಣಾ, ನಾನು ಸೂಳೆಯಲ್ಲ. ಅಣ್ಣಾ, ಮತ್ತೆ ನನ್ನ ಕಂಡು ಕಂಡು ಆರೆಂದು ಬಂದಿರಣ್ಣಾ ? ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪರಪುರುಷನು ನಮಗಾಗದ ಮೋರೆ ನೋಡಣ್ಣಾ ?

ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ. Read More »

ಬಂದಹನೆಂದು ಬಟ್ಟೆಯ ನೋಡಿ,

ಬಂದಹನೆಂದು ಬಟ್ಟೆಯ ನೋಡಿ, ಬಾರದಿದ್ದಡೆ ಕರಗಿ ಕೊರಗಿದೆನವ್ವಾ. ತಡವಾದಡೆ ಬಡವಾದೆ ತಾಯೆ. ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ ತಕ್ಕೆಸಡಲಿದ ಜಕ್ಕವಕ್ಕಿಯಂತಾದೆನವ್ವಾ

ಬಂದಹನೆಂದು ಬಟ್ಟೆಯ ನೋಡಿ, Read More »

ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ

ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರು. ಒಬ್ಬ ಭಾವರೂಪ, ಒಬ್ಬ ಪ್ರಾಣರೂಪ ; ಒಬ್ಬ ಐಮುಖವಾಗಿ ಕಾಯರೂಪಾದ ; ಇಬ್ಬರು ಉತ್ಪತ್ತಿ ಸ್ಥಿತಿಗೆ ಕಾರಣವಾದರು. ಐಮುಖನರಮನೆ ಸುಖವಿಲ್ಲೆಂದು ಕೈಲಾಸವ ಹೊಗೆನು, ಮತ್ರ್ಯಕ್ಕೆ ಅಡಿ ಇಡೆನು ; ಚೆನ್ನಮಲ್ಲಿಕಾರ್ಜುನದೇವಾ, ನೀನೇ ಸಾಕ್ಷಿ.

ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ Read More »

ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು.

ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು. ಬೆಟ್ಟ ಲಿಂಗವೆಂಬೆನೆ ? ಮೆಟ್ಟಿ ನಿಂದಲ್ಲಿ ಹೋಯಿತ್ತು. ತರುಮರಾದಿಗಳು ಲಿಂಗವೆಂಬೆನೆ ?ತರಿದಲ್ಲಿ ಹೋಯಿತ್ತು. ಲಿಂಗ ಜಂಗಮದ ಪಾದವೇ ಗತಿಯೆಂದು ನಂಬಿದ ಚೆನ್ನಮಲ್ಲಿಕಾರ್ಜುನಾ, ಸಂಗನಬಸವಣ್ಣನ ಮಾತು ಕೇಳದೆ ಕೆಟ್ಟೆನಯ್ಯಾ.

ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು. Read More »

ಬಂಜೆ ಬೇನೆಯನರಿವಳೆ ?

ಬಂಜೆ ಬೇನೆಯನರಿವಳೆ ? ಬಲದಾಯಿ ಮದ್ದ ಬಲ್ಲಳೆ ? ನೊಂದವರ ನೋವ ನೋಯದವರೆತ್ತ ಬಲ್ಲರೊ ? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ, ಎಲೆ ತಾಯಿಗಳಿರಾ ?

ಬಂಜೆ ಬೇನೆಯನರಿವಳೆ ? Read More »

ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ?

ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ? ದೇವ ದಾನವ ಮಾನವರೆಲ್ಲಾ ಜೋಳವಾಳಿಯಲೈದಾರೆ. ಜಾಣಕಲುಕುಟಿಗನನಗಲದೆ ಹೂವನೆ ಕೊಯ್ದು, ಕಲಿಯುಗದ ಕರಸ್ಥಲದೇವಪೂಜೆ ಘನ. ಮೇರುವಿನ ಕುದುರೆ ನಲಿದಾಡಲದುಭುತ. ಜಾರಜಂಗುಳಿಗಳ ಜಗಳ ಮೇಳಾಪ, ಮರುಪತ್ತದ ಮಾತು, ನಗೆ ಹಗರಣ ? ಕ್ಷೀರಸಾಗರದಲ್ಲಿ ದಾರಿಯಳವಡದಯ್ಯಾ. ನೀ ಹೇಳಬೇಕು, ಭಕ್ತರೆಂತಿಪ್ಪರೊ ? ಪಂಚವರ್ಣದ ಬಣ್ಣ ಸಂತೆಯ ಪರದಾಟವು ಚೆನ್ನಮಲ್ಲಿಕಾರ್ಜುನಯ್ಯಾ, ತ್ರಿಭುವನದ ಹೆಂಡಿರ ನೀರಹೊಳೆಯಲ್ಲಿರಿಸಿತ್ತು.

ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ? Read More »

ಪ್ರಾಣ ಲಿಂಗವೆಂದರಿದಬಳಿಕ

ಪ್ರಾಣ ಲಿಂಗವೆಂದರಿದಬಳಿಕ ಪ್ರಾಣ ಪ್ರಸಾದವಾಯಿತ್ತು. ಲಿಂಗ ಪ್ರಾಣವೆಂದರಿದಬಳಿಕ ಅಂಗದಾಸೆ ಹಿಂಗಿತ್ತು. ಲಿಂಗ ಸೋಂಕಿನ ಸಂಗಿಗೆ ಕಂಗಳೆ ಕರುವಾದವಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಹಿಂಗದೆ ಅನಿಮಿಷನಾಗಿಹ ಶರಣಂಗೆ.

ಪ್ರಾಣ ಲಿಂಗವೆಂದರಿದಬಳಿಕ Read More »

ಪಾತಾಳವಿತ್ತಿತ್ತ, ಪಾದಂಗಳತ್ತತ್ತ,

ಪಾತಾಳವಿತ್ತಿತ್ತ, ಪಾದಂಗಳತ್ತತ್ತ, ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ, ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ, ಚೆನ್ನಮಲ್ಲಿಕಾರ್ಜುನಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಲ್ಲಾ ಲಿಂಗವೆ.

ಪಾತಾಳವಿತ್ತಿತ್ತ, ಪಾದಂಗಳತ್ತತ್ತ, Read More »

ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು

ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು ಅಂತಃಕರಣಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರವೆಂಬ ಶಿಣಿಗೋಲಂ ಪಿಡಿದು ವ್ರತ ಕ್ರಿಯವೆಂಬ ಸಾಲನೆತ್ತಿ ನಿರಾಶೆಯೆಂಬ ಕುಂಟೆಯಂ ತುರುಗಿ ದುಷ್ಕರ್ಮಂಗಳೆಂಬ ದುರ್ಮಲರಿಗಳಂ ಕಳೆದು ನಾನಾ ಮೂಲದ ಬೇರಂ ಕಿತ್ತು e್ಞನಾಗ್ನಿಯೆಂಬ ಬೆಂಕಿಯಂ ಸುಟ್ಟು ಈ ಹೊಲನ ಹಸನಮಾಡಿ ಬಿತ್ತುವ ಪರ್ಯಾಯವೆಂತೆಂದೊಡೆ ನಾದ ಬಿಂದು ಕಳೆ ಮೊಳೆ ಹದ ಬೆದೆಯನರಿದು ಸ್ಥೂಲವೆಂಬ ದಿಂಡಿಂಗೆ ಶ್ರೀದೇವರೆಂಬ ತಾಳನಟ್ಟು ಸುಷುಮ್ನನಾಳವೆಂಬ ಕೋವಿಯಂ ಜೋಡಿಸಿ ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟೆಯಂ ಬಲಿದು ಕುಂಡಲಿಯ ಸರ್ಪನ ಹಗ್ಗವಂ ಬಿಗಿದು ಹಂಸನೆಂಬ ಎತ್ತಂ ಕಟ್ಟಿ ಪ್ರಣವವೆಂಬ

ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಪಿಡಿದು Read More »

ಪೃಥ್ವಿ ಪೃಥ್ವಿಯ ಕೂಡದ ಮುನ್ನ,

ಪೃಥ್ವಿ ಪೃಥ್ವಿಯ ಕೂಡದ ಮುನ್ನ, ಅಪ್ಪು ಅಪ್ಪುವ ಕೂಡದ ಮುನ್ನ, ತೇಜ ತೇಜವ ಕೂಡದ ಮುನ್ನ, ವಾಯು ವಾಯುವ ಕೂಡದ ಮುನ್ನ, ಆಕಾಶ ಆಕಾಶವ ಕೂಡದ ಮುನ್ನ ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ ?

ಪೃಥ್ವಿ ಪೃಥ್ವಿಯ ಕೂಡದ ಮುನ್ನ, Read More »

ಪುಣ್ಯಪಾಪಂಗಳನರಿಯದ ಮುನ್ನ,

ಪುಣ್ಯಪಾಪಂಗಳನರಿಯದ ಮುನ್ನ, ಅನೇಕ ಭವಂಗಳ ಬಂದೆನಯ್ಯಾ ? ಬಂದು ಬಂದು ನೊಂದು ಬೆಂದೆನಯ್ಯಾ ? ಬಂದು ನಿಮ್ಮ ನಂಬಿ ಶರಣುವೊಕ್ಕೆನಯ್ಯಾ ? ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯಾ ನಿಮ್ಮ ಧರ್ಮ ನಿಮ್ಮ ಧರ್ಮ. ನಿಮ್ಮಲೊಂದು ಬೇಡುವೆನು, ಎನ್ನ ಬಂಧನ ಬಿಡುವಂತೆ ಮಾಡಯ್ಯಾ ಚೆನ್ನಮಲ್ಲಿಕಾರ್ಜುನಾ

ಪುಣ್ಯಪಾಪಂಗಳನರಿಯದ ಮುನ್ನ, Read More »

ಪುರುಷನ ಮುಂದೆ ಮಾಯೆ

ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು. ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು. ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ ಮರುಳಾಗಿ ತೋರುವುದು. ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ.

ಪುರುಷನ ಮುಂದೆ ಮಾಯೆ Read More »

ಪಡೆವುದರಿದು ನರಜನ್ಮವ,

ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ, ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಲಿಂಗಜಂಗಮಸೇವೆಯ, ಪಡೆವುದರಿದು ಸತ್ಯಶರಣರನುಭಾವವ. ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೆ.

ಪಡೆವುದರಿದು ನರಜನ್ಮವ, Read More »

ಪರರೊಡತಣ ಮಾತು ನಮಗೇತರದಯ್ಯ ?

ಪರರೊಡತಣ ಮಾತು ನಮಗೇತರದಯ್ಯ ? ಪರರೊಡತಣ ಗೊಟ್ಟಿ ನಮಗೇಕಯ್ಯ ? ಲೋಕದ ಮಾನವರೊಡನೆ ನಮಗೇತರ ವಿಚಾರವಯ್ಯ ? ಚೆನ್ನಮಲ್ಲಿಕಾರ್ಜುನನ ಒಲವಿಲ್ಲದವರೊಡನೆ ನಮಗೇತರ ವಿಚಾರವಯ್ಯಾ ?

ಪರರೊಡತಣ ಮಾತು ನಮಗೇತರದಯ್ಯ ? Read More »

ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ,

ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ, ಪವಳದ ಚಪ್ಪರವಿಕ್ಕಿ, ಮುತ್ತುಮಾಣಿಕದ ಮೇಲುಕಟ್ಟ ಕಟ್ಟಿ, ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯಮಾಡಿದರು

ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ, Read More »

ಪಂಚೇಂದ್ರಿಯದ ಉರವಣೆಯ

ಪಂಚೇಂದ್ರಿಯದ ಉರವಣೆಯ ಉದುಮದದ ಭರದ ಜವ್ವನದೊಡಲು ವೃಥಾ ಹೋಯಿತ್ತಲ್ಲಾ ? ತುಂಬಿ ಪರಿಮಳವ ಕೊಂಡು ಲಂಬಿಸುವ ತೆರನಂತೆ ಇನ್ನೆಂದಿಂಗೆ ಒಳಕೊಂಬೆಯೊ, ಅಯ್ಯಾ ಚೆನ್ನಮಲ್ಲಿಕಾರ್ಜುನಾ ? |

ಪಂಚೇಂದ್ರಿಯದ ಉರವಣೆಯ Read More »

ಪಂಚೇಂದ್ರಿಯಂಗಳೊಳಗೆ

ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?

ಪಂಚೇಂದ್ರಿಯಂಗಳೊಳಗೆ Read More »

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ?

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? ಹರಿಬ್ರಹ್ಮರ ಬಲುಹ ಮುರಿದು ಕೊಂದು ಕೂಗಿತಲ್ಲಾ ? ಮಹಾ ಋಷಿಯರ ತಪವ ಕೆಡಿಸಿ ಕೊಂದು ಕೂಗಿತಲ್ಲಾ ? ಚೆನ್ನಮಲ್ಲಿಕಾರ್ಜುನಂಗೆ ಶರಣೆಂದು ನಂಬಿ ಮರೆಹೊಕ್ಕಡೆ ಅಂಜಿ ನಿಂದುದಲ್ಲಾ ?

ಪಂಚೇಂದ್ರಿಯ ಸಪ್ತಧಾತು ಅಷ್ಟಮದ ಕೊಂದು ಕೂಗಿತಲ್ಲಾ ? Read More »

ಫಲ ಒಳಗೆ ಪಕ್ವವಾಗಿಯಲ್ಲದೆ,

ಫಲ ಒಳಗೆ ಪಕ್ವವಾಗಿಯಲ್ಲದೆ, ಹೊರಗಳ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿಹಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನದೇವರದೇವನ ಒಳಗಾದವಳ.

ಫಲ ಒಳಗೆ ಪಕ್ವವಾಗಿಯಲ್ಲದೆ, Read More »

ನೀನಿಕ್ಕಿದ ಸರಿದೊಡಕನಾರು ಬಿಡಿಸಬಲ್ಲರಯ್ಯಾ ?

ನೀನಿಕ್ಕಿದ ಸರಿದೊಡಕನಾರು ಬಿಡಿಸಬಲ್ಲರಯ್ಯಾ ? ನೀನಿಕ್ಕಿದ ಕಟ್ಟನಾರು ಕಳೆಯಬಲ್ಲರಯ್ಯಾ ? ನೀ ಸೀಳಿದ ರೇಖೆಯನಾರು ಮೀರಬಹುದಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ, ನೀನು ಕಳುಹಿದ ಸೆರೆಗೆ ಮಾರುವೋಗದಿರ್ದಡೆ ಎನ್ನಿಚ್ಚೆಯ ಅಯ್ಯಾ ?

ನೀನಿಕ್ಕಿದ ಸರಿದೊಡಕನಾರು ಬಿಡಿಸಬಲ್ಲರಯ್ಯಾ ? Read More »

ನೀನು ಹೋಗೆಂದಡೆ ಹೋದೆನಯ್ಯಾ.

ನೀನು ಹೋಗೆಂದಡೆ ಹೋದೆನಯ್ಯಾ. ನೀನು ಹುಟ್ಟೆಂದಡೆ ಹುಟ್ಟಿದೆನಯ್ಯಾ. ನೀನು ಬೆಳೆಯೆಂದ ಠಾವಿನಲ್ಲಿ ಬೆಳೆದೆನಯ್ಯಾ. ನೀನು ಹಿಡಿಯೆಂದವರ ಮನೆಯ ಹೊಕ್ಕೆನಯ್ಯಾ. ನೀನು ಮಾಡೆಂದ ಕೆಲಸವ ಮಾಡಿಕೊಂಡು ನಿಮ್ಮ ಬೆಸಲಾದ ಮಗಳಾಗಿರ್ದೆ ಕಾಣಾ ಚೆನ್ನಮಲ್ಲಿಕಾರ್ಜುನಾ.

ನೀನು ಹೋಗೆಂದಡೆ ಹೋದೆನಯ್ಯಾ. Read More »

ನೀರಕ್ಷೀರದಂತೆ ನೀನಿಪ್ಪೆಯಾಗಿ,

ನೀರಕ್ಷೀರದಂತೆ ನೀನಿಪ್ಪೆಯಾಗಿ, ಆವುದು ಮುಂದು, ಆವುದು ಹಿಂದು ಎಂದರಿಯೆ. ಆವುದು ಕರ್ತೃ, ಆವುದು ಭೃತ್ಯನೆಂದರಿಯೆ. ಆವುದು ಘನ, ಆವುದು ಕಿರಿದೆಂದರಿಯೆ. ಚೆನ್ನಮಲ್ಲಿಕಾರ್ಜುನಯ್ಯಾ, ನೀನೊಲಿದು ಕೊಂಡಾಡಿದಡೆ ಇರುಹೆ ರುದ್ರನಾಗದೆ ಹೇಳಯ್ಯಾ ?

ನೀರಕ್ಷೀರದಂತೆ ನೀನಿಪ್ಪೆಯಾಗಿ, Read More »

ನಿಮ್ಮ ನಿಲವಿಂಗೆ ನೀವು ನಾಚಬೇಡವೆ ?

ನಿಮ್ಮ ನಿಲವಿಂಗೆ ನೀವು ನಾಚಬೇಡವೆ ? ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ ನಡೆನುಡಿ ಏಕೆ ? ಅಲ್ಲ ಎನಿಸಿಕೊಂಬುದರಿಂದ ಆ ಕ್ಷಣವೆ ಸಾವುದು ಲೇಸು ಕಾಣಾ ಚೆನ್ನಮಲ್ಲಿಕಾರ್ಜುನಾ.

ನಿಮ್ಮ ನಿಲವಿಂಗೆ ನೀವು ನಾಚಬೇಡವೆ ? Read More »

ನಿಮ್ಮ ಒಕ್ಕುದ ಕೊಂಡು ಓಲಾಡುವೆ,

ನಿಮ್ಮ ಒಕ್ಕುದ ಕೊಂಡು ಓಲಾಡುವೆ, ಮಿಕ್ಕುದ ಕೊಂಡು ಕುಣಿದಾಡುವೆ. ನಿಮ್ಮ ತೊತ್ತಿನ ತೊತ್ತಿನ ಕರುಣಪ್ರಸಾದವ ಕೊಂಡು ನಿತ್ಯಳಾಗಿ ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನಾ.

ನಿಮ್ಮ ಒಕ್ಕುದ ಕೊಂಡು ಓಲಾಡುವೆ, Read More »