Akka Mahadevi

ಅಯ್ಯಾ, ನಿಮ್ಮ ಶರಣರ ಕೂಡಿದ

ಅಯ್ಯಾ, ನಿಮ್ಮ ಶರಣರ ಕೂಡಿದ ಸುಖವನುಪಮೆಗೆ ತರಬಾರದಯ್ಯಾ. ಅಯ್ಯಾ, ನಿಮ್ಮ ಮಹಂತರ ಕೂಡಿ ಅಗಲುವ ಧಾವತಿಗಿಂತ ಸಾವುದೇ ಕರಲೇಸಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನರುಹಿದ ಮಹಿಮರನಗಲಿಆನು ನಿಲ್ಲಲಾರೆನಯ್ಯಾ.

ಅಯ್ಯಾ, ನಿಮ್ಮ ಶರಣರ ಕೂಡಿದ Read More »

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ತನು ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಮನ ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಪ್ರಾಣ ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳು ಎನ್ನ ಒರೆದೊರೆದು ಆಗುಮಾಡಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗಾನು ತೊಡಿಗೆಯಾದೆನು.

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ Read More »

ಅಯ್ಯಾ, ಚಿದಂಗ ಚಿದ್ಘನಲಿಂಗ

ಅಯ್ಯಾ, ಚಿದಂಗ ಚಿದ್ಘನಲಿಂಗ ಶಕ್ತಿ ಭಕ್ತಿ ಹಸ್ತ ಮುಖ ಪದಾರ್ಥ ಪ್ರಸಾದ ಎಂಬಿವಾದಿಯಾದ ಸಮಸ್ತ ಸಕೀಲಂಗಳ ನೆಲೆ ಕಲೆಯರಿಯದೆ, ಜಿಹ್ವಾಲಂಪಟಕ್ಕೆ ಆಹ್ವಾನಿಸಿ, ಗುಹ್ಯಾಲಂಪಟಕ್ಕೆ ವಿಸರ್ಜಿಸಿ, ಸಕಲೇಂದ್ರಿಯಮುಖದಲ್ಲಿ ಮೋಹಿಯಾಗಿ, ಸದ್ಗುರುಕರುಣಾಮೃತರಸ ತಾನೆಂದರಿಯದೆ ಬರಿದೆ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಗುರುಚರಪರವೆಂದು ಬೊಗಳುವ ಕುನ್ನಿಗಳ ನೋಡಿ ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯಾ,ಚೆನ್ನಮಲ್ಲಿಕಾರ್ಜುನಾ.

ಅಯ್ಯಾ, ಚಿದಂಗ ಚಿದ್ಘನಲಿಂಗ Read More »

ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ

ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ ಪರಿಯನೇನೆಂಬೆನಯ್ಯಾ ಘನವನೊಳಕೊಂಡ ಮನದ ಮಹಾನುಭಾವಿಗಳ ಬಳಿವಿಡಿದು ಬದುಕುವೆನಯ್ಯಾ. ಅಯ್ಯಾ, ನಿನ್ನಲ್ಲಿ ನಿಂದು ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ ದಿನವ ಕಳೆಯಿಸಯ್ಯಾಚೆನ್ನಮಲ್ಲಿಕಾರ್ಜುನಾ.

ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ Read More »

ಅಂಗೈಯೊಳಗಣ ಲಿಂಗವ ಪೂಜಿಸುತ್ತ,

ಅಂಗೈಯೊಳಗಣ ಲಿಂಗವ ಪೂಜಿಸುತ್ತ, ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ. ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.

ಅಂಗೈಯೊಳಗಣ ಲಿಂಗವ ಪೂಜಿಸುತ್ತ, Read More »

ಅಂಗಸಂಗದಲ್ಲಿ ಲಿಂಗಸಂಗಿಯಾದೆನು.

ಅಂಗಸಂಗದಲ್ಲಿ ಲಿಂಗಸಂಗಿಯಾದೆನು. ಲಿಂಗಸಂಗದಲ್ಲಿ ಅಂಗಸಂಗಿಯಾದೆನು. ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು. ನುಡಿಯ ಗಡಣವ ಮರೆದು ತೆರಹಿಲ್ಲದಿದ್ದೆನು. ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ ಎನ್ನ ನಾನು ಏನೆಂದೂ ಅರಿಯೆನಯ್ಯಾ.

ಅಂಗಸಂಗದಲ್ಲಿ ಲಿಂಗಸಂಗಿಯಾದೆನು. Read More »

ಅಂಗವಿಕಾರಸಂಗವ ಮರೆದು,

ಅಂಗವಿಕಾರಸಂಗವ ಮರೆದು, ಲಿಂಗವನೊಡಗೂಡುತಿಪ್ಪವರ ತೋರಾ ಎನಗೆ. ಕಾಮವಿಕಾರಕತ್ತಲೆಯಳಿದು, ಭಕ್ತಿಪ್ರಾಣವಾಗಿಪ್ಪವರ ತೋರಾ ಎನಗೆ. ತ್ರಿಕರಣ ಶುದ್ಧವಾಗಿ ನಿಮ್ಮ ನೆರೆ ನಂಬಿದಸದ್ಭಕ್ತರ ತೋರಾ ಎನಗೆ ಚೆನ್ನಮಲ್ಲಿಕಾರ್ಜುನಾ.

ಅಂಗವಿಕಾರಸಂಗವ ಮರೆದು, Read More »

ಅಂಗವ ಲಿಂಗಮುಖದಲ್ಲಿ ಅರ್ಪಿಸಿ,

ಅಂಗವ ಲಿಂಗಮುಖದಲ್ಲಿ ಅರ್ಪಿಸಿ, ಅಂಗ ಅನಂಗವಾಯಿತ್ತು. ಮನವ ಅರಿವಿಂಗರ್ಪಿಸಿ, ಮನ ಲಯವಾಯಿತ್ತು. ಭಾವವ ತೃಪ್ತಿಗರ್ಪಿಸಿ, ಭಾವ ಬಯಲಾಯಿತ್ತು. ಅಂಗ ಮನ ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು. ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ, ಶರಣಸತಿ ಲಿಂಗಪತಿಯಾದೆನು. ಇದು ಕಾರಣ, ಚೆನ್ನಮಲ್ಲಿಕಾರ್ಜುನನೆಂಬ ಗಂಡನಒಳಹೊಕ್ಕು ಬೆರಸಿದೆನು.

ಅಂಗವ ಲಿಂಗಮುಖದಲ್ಲಿ ಅರ್ಪಿಸಿ, Read More »

ಅಯ್ಯಾ, ನೀನೆನ್ನ ಮೊರೆಯನಾಲಿಸಿದಡಾಲಿಸು,

ಅಯ್ಯಾ, ನೀನೆನ್ನ ಮೊರೆಯನಾಲಿಸಿದಡಾಲಿಸು, ಆಲಿಸದಿರ್ದಡೆ ಮಾಣು. ಅಯ್ಯಾ, ನೀನೆನ್ನ ದುಃಖವ ನೋಡಿದಡೆ ನೋಡು, ನೋಡದಿರ್ದಡೆ ಮಾಣು. ನಿನಗಿದು ವಿಧಿಯೆ ? ನೀನೊಲ್ಲದಡೆ ಆನೊಲಿಸುವ ಪರಿಯೆಂತಯ್ಯಾ ? ಮನವೆಳಸಿ ಮಾರುವೋಗಿ ಮರೆವೊಕ್ಕಡ ಕೊಂಬ ಪರಿಯೆಂತಯ್ಯಾ ಚೆನ್ನಮಲ್ಲಿಕಾರ್ಜುನಾ ?ಆಲಿಸದಿರ್ದಡೆ ಮಾಣು. ಅಯ್ಯಾ, ನೀನೆನ್ನ ದುಃಖವ ನೋಡಿದಡೆ ನೋಡು, ನೋಡದಿರ್ದಡೆ ಮಾಣು. ನಿನಗಿದು ವಿಧಿಯೆ ? ನೀನೊಲ್ಲದಡೆ ಆನೊಲಿಸುವ ಪರಿಯೆಂತಯ್ಯಾ ? ಮನವೆಳಸಿ ಮಾರುವೋಗಿ ಮರೆವೊಕ್ಕಡೆಕೊಂಬ ಪರಿಯೆಂತಯ್ಯಾ ಚೆನ್ನಮಲ್ಲಿಕಾರ್ಜುನಾ ?

ಅಯ್ಯಾ, ನೀನೆನ್ನ ಮೊರೆಯನಾಲಿಸಿದಡಾಲಿಸು, Read More »

ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ.

ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ. ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ. ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ. ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ. ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ, ನಿಃಪತಿ ಲಿಂಗೈಕ್ಯವ ಮಾಡಿದೆ. ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡದೆ. ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ, ಲಿಂಗವೆಂಬ ಘನವು ಎನ್ನಲ್ಲಿಅಳಿಯಿತ್ತು ಕಾಣಾ ಸಂಗನಬಸವಣ್ಣಾ.

ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. Read More »

ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ

ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ.||1|| ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ.||2|| ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ.||3|| ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ.||4|| ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ ?||5|| ಚೆನ್ನಮಲ್ಲಿಕಾರ್ಜುನ, ಕಾಮನಕೊಂದು ಮನಸಿಜನಾಗುಳುಹಿದಡೆ||6|| ಮನಸಿಜನ ತಲೆಯ ಬರಹವ ತೊಡೆದೆನು.||7||

ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ Read More »

ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು

ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.||1|| ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು.||2|| ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು.|||3|| ಚೆನ್ನಮಲ್ಲಿಕಾರ್ಜುನಾ,ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು||4||

ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು Read More »

ಅಂಗ ಕ್ರಿಯಾಲಿಂಗವ ವೇಧಿಸಿ,

ಅಂಗ ಕ್ರಿಯಾಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.||1|| ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ, ಮನ ಜಂಗಮಲಿಂಗದೊಳಗಾಯಿತ್ತು.||2|| ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪ್ರಸಾದವ ಭೋಗಿಸಿ, ಭಾವ ಗುರುಲಿಂಗದೊಳಗಾಯಿತ್ತು.||3|| ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯಿಂದ ಸಂದಳಿದು ಸ್ವಯಲಿಂಗಿಯಾದೆನಯ್ಯಾ ಪ್ರಭುವೆ||4||

ಅಂಗ ಕ್ರಿಯಾಲಿಂಗವ ವೇಧಿಸಿ, Read More »

ಅಳಿಸಂಕುಲವೇ ಮಾಮರವೇ

ಅಳಿಸಂಕುಲವೇ ಮಾಮರವೇ ಬೆಳುದಿಂಗಳೇ ಕೋಗಿಲೆಯೇ ನಿಮ್ಮ ನಿಮ್ಮನ್ನೆಲ್ಲರನು ಒಂದ ಬೇಡುವೆನು ಚನ್ನ ಮಲ್ಲಿಕಾರ್ಜುನದೇವರ ಕಂಡರೆ ಕರೆದು ತೋರಿರೆ ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ ನೀವು ಕಾಣಿರೇ ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೇ ನೀವು ಕಾಣಿರೇ ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೇ ನೀವು ಕಾಣಿರೇ ಕೊಳತಡಿಯೊಳಾಡುವ ಹಂಸೆಗಳಿರಾ, ನೀವು ಕಾಣಿರೇ ನೀವು ಕಾಣಿರೇ ಗಿರಿ ಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೇ ನೀವು ಕಾಣಿರೇ ಚನ್ನಮಲ್ಲಿಕಾರ್ಜುನನೆಲ್ಲಿರ್ದಿಹನೆಂದು ನೀವು ಹೇಳಿರೇ ನೀವು ಹೇಳಿರೇ                                        ——ಅಕ್ಕಮಹಾದೇವಿ

ಅಳಿಸಂಕುಲವೇ ಮಾಮರವೇ Read More »