ಬುದ್ಧ

ಬೋಧಿವೃಕ್ಷದಡಿ ಧ್ಯಾನದಿ

ಬೋಧಿವೃಕ್ಷದಡಿ ಧ್ಯಾನದಿ ಮುಳುಗಿಹ ಯೋಗಿವರ್ಯನೆ ನೀನಾರು | ತಪದ ತಾಪದಿಂ ದೇಹವು ಸೊರಗಿದೆ ಜ್ಯೋತಿಯು ಹಣೆಯಲಿ ಬೆಳಗುತಿದೆ|| ಹೊರಗಡೆ ಕಾಂಬುದು ಜೋಗಿಯ ವೇಷ ಮುಖದಲಿ ರಾಜಕುಮಾರನ ತೇಜ| ಯಾರ ಭವನವನು ಅಂಧಕಾರದಲಿ ಮುಳುಗಿಸಿ ಬಂದಿಹೆ ಪೇಳೆಲೆ ಜವದಿ|| ಜ್ಞಾನಲಾಭವೋ ದೇಹಪಾತವೋ ಆಗಲಿ ಒಂದು ಎರಡರಲಿಂದು| ಪಣವ ತೊಟ್ಟು ನೀ ಬಸವಳಿದಿರಲು ಕಲ್ಲೂ ಕರಗುತ ನೀರಾಗುವುದು|| ತಾಪತ್ರಯದಲಿ ಬೆಂದಿಹ ಜನರನು ಉದ್ಧರಿಸಲು ನೀ ಬಂದಿಹೆಯೇನು| ವಿಶ್ವಪ್ರೇಮವ ಪ್ರಚಾರಗೈಯಲು ನಿಜಸುಖವನು ನೀ ತ್ಯಜಿಸಿಹೆಯೇನು||                                         —-ಸ್ವಾಮಿ ಹರ್ಷಾನಂದ

ಬೋಧಿವೃಕ್ಷದಡಿ ಧ್ಯಾನದಿ Read More »

ಬುದ್ಧ ಚಂದ್ರೋದಯದಿ

ಬುದ್ಧಚಂದ್ರೋದಯದಿ ಹಿಗ್ಗಿ ನಮ್ಮೆದೆ ಕಡಲು ಶಾಂತಿ ಶೀಕರವನಿದೋ ಚಿಲ್ಲುತಿಹುದು ಜಗವ ಗೆಲ್ಲುತಿಹುದು|| ನೂರು ಸಾಸಿರ ದಳದ ಬುದ್ಧಪದ್ಮವು ಅರಳೆ ಭಕುತಭೃಂಗವು ಬಂದು ಮುತ್ತುತಿಹುದು ಸುತ್ತ ಸುತ್ತುತಿಹುದು|| ಜ್ವಾಲೆ ಮೇಲುದ ಹೊದೆದು ಅಗ್ನಿದೇವನೆ ನಡೆದು ಕರ್ಮಕಾನನವನ್ನು ದಹಿಸಲೆಂದು ನಡೆದು ಬರುವನಿಂದು||                             —-ಪ್ರಭುಶಂಕರ

ಬುದ್ಧ ಚಂದ್ರೋದಯದಿ Read More »

ಕರುಣ ಶೀತಲ

ಕರುಣ ಶೀತಲ ಕಿರಣ ಶೋಭಿತ ತರಣಿ ನಿನ್ನಯ ಚರಣಕೆರಗುವೆ|| ಕಾಮ ಮೋಹದ ತಮವ ಕಳೆಯಲು ಪ್ರೇಮ ಚ್ಯೋತಿಯ ಕಾಂತಿ ಬೆಳಗಿಹೆ| ವಿಷಮ ಶೈತ್ಯದಿ ಭೀತ ಜಗಕೆ ಸೌಮ್ಯ ಸಮತೆಯ ಸ್ಥೈರ್ಯ ನೀಡಿಹೆ|| ಕರ್ಮಕಾಂಡದ ಕ್ರೌರ್ಯ ಜಡತೆಯಿಂ ಧರ್ಮಶಾಸ್ತ್ರದ ಶುಷ್ಕವಾದದಿಂ| ಧರ್ಮಬಾಳ್ವೆಯ ಸಲಹಲೆಂದು ಧರ್ಮಮೂರುತಿ ಇಳಿದು ಬಂದೆ|| ಸರ್ವಧರ್ಮದ ಸರ್ವಕರ್ಮದ ಸರ್ವಸಾರವ ತೆರೆದು ತೋರಿದೆ| ಸರ್ವಸೃಷ್ಟಿ ವಿಮುಕ್ತಿಸಾಧಕ ಸರ್ವತ್ಯಾಗಿ ಸಾರ್ವಭೌಮ||                              —–ಸ್ವಾಮಿ ಶಾಸ್ತ್ರಾನಂದ

ಕರುಣ ಶೀತಲ Read More »