ಯಾದವ ನೀ ಬಾ
ಯಾದವ ನೀ ಬಾ ಯದುಕುಲನಂದನ ಮಾಧವ ಮಧುಸೂದನ ಬಾರೋ|| ಸೋದರಮಾವನ ಮಥುರೆಲಿ ಮಡುಹಿದ ಯಶೋದಾಕಂದ ನೀ ಬಾರೋ|| ಕಣಕಾಲಂದುಗೆ ಘುಲುಘುಲುರೆನುತಲಿ ಝಣಝಣ ವೇಣುನಿನಾದದಲಿ| ಚಿಣ್ಣಿಕೋಲು ಚೆಂಡು ಬುಗುರಿಯನಾಡುತ ಸಣ್ಣವರೊಡಗೂಡಿ ನೀ ಬಾರೋ|| ಶಂಖ ಚಕ್ರವು ಕೈಯಲಿ ಹೊಳೆಯುತ ಬಿಂಕದ ಗೋವಳ ನೀ ಬಾರೋ| ಅಕಳಂಕ ಚರಿತನೆ ಆದಿನಾರಾಯಣ ಬೇಕೆಂಬ ಬಕ್ತರಿಗೊಲಿ ಬಾರೋ|| ಖಗವಾಹನನೆ ಬಗೆಬಗೆರೂಪನೆ ನಗೆಮೊಗದರಸನೆ ನೀ ಬಾರೋ| ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರವಿಟ್ಠಲ ನೀ ಬಾರೋ|| —-ಪುರಂದರದಾಸ