ಸಪ್ತಧಾತುಗಳಿಂದ ಬಳಸಲ್ಪಟ್ಟ ಈ ಶರೀರವೆ
ಶಿವನ ಪಟ್ಟಣವೆಂದು ಹೇಳಲ್ಪಟ್ಟಿತ್ತು.
ಈ ಪಿಂಡವೆಂಬ ಪಟ್ಟಣದಲ್ಲಿ
ಸೂಕ್ಷ್ಮವಾದಂಥಧಾರಾಕಾಶದಿಂದ ಮನೋಹರವಾಗಿದ್ದ
ಹೃದಯಕಮಲವೆ ಅಂತಃಪುರವು.
ಅಲ್ಲಿ ನಿತ್ಯಪರಿಪೂರ್ಣತ್ವದಿಂದ ಸಿದ್ಧನಾಗಿ ಸಚ್ಚಿದಾನಂದವೇ
ಕುರುಹಾಗುಳ್ಳ ಪರಮಶಿವನು ಜಲದಲ್ಲಿ ತೋರುತ್ತಿರ್ದ
ಆಕಾಶದೋಪಾದಿಯಲ್ಲಿ ಪ್ರತ್ಯಕ್ಷವಾಗಿ
ಪ್ರಕಾಶವೇ ಸ್ವರೂಪವಾಗುಳ್ಳಾತನಾಗಿ ಇರುತಿರ್ದನು.
ಆ ಜಲಮಧ್ಯದಲ್ಲಿಯ ಆಕಾಶ ಬಿಂಬದಲ್ಲಿರುತಿರ್ದ
ಘಟಾಕಾಶದೋಪಾದಿಯಲ್ಲಿ
ಖಂಡಿತನಾಗಿರ್ದ ಚಿದ್ರೂಪನಾದ ಶಿವನನು
ಭಾವಿಸುವುದಯ್ಯ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.