ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ,
ಲಿಂಗಸ್ಥಲ ನಿಃಶೂನ್ಯವಾಯಿತ್ತು ಸಂಗಮದೇವರಬೆನ್ನಿನಲ್ಲಿ.
ಜಂಗಮಸ್ಥಲ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ,
ಜಂಗಮಸ್ಥಲ ನಿಃಶೂನ್ಯವಾಯಿತ್ತು ಪ್ರಭುದೇವರಬೆನ್ನಿನಲ್ಲಿ.
ಭಕ್ತಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ,
ಭಕ್ತಿಸ್ಥಲ ನಿಃಶೂನ್ಯವಾಯಿತ್ತು ಸಂಗನಬಸವರಾಜದೇವರಬೆನ್ನಿನಲ್ಲಿ.
ಪ್ರಾಣಲಿಂಗಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ,
ಪ್ರಾಣಲಿಂಗಿಸ್ಥಲ ನಿಃಶೂನ್ಯವಾಯಿತ್ತು ಸಿದ್ಧರಾಮೇಶ್ವರದೇವರಬೆನ್ನಿನಲ್ಲಿ.
ಪ್ರಸಾದಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ,
ಪ್ರಸಾದಿಸ್ಥಲ ನಿಃಶೂನ್ಯವಾಯಿತ್ತು ಚಿಕ್ಕದಣ್ಣಾಯಕರಬೆನ್ನಿನಲ್ಲಿ.
ಐಕ್ಯಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ,
ಐಕ್ಯಸ್ಥಲ ನಿಃಶೂನ್ಯವಾಯಿತ್ತು ಅಜಗಣ್ಣದೇವರಬೆನ್ನಿನಲ್ಲಿ.
ಇಂತೆನ್ನ ಷಟ್‍ಸ್ಥಲಂಗಳು ಒಬ್ಬೊಬ್ಬರ ಬೆನ್ನಿನಲ್ಲಿ ನಿಃಶೂನ್ಯವಾದವು
ಎನಗಿನ್ನಾವ ಕಿಂಚಿತುಸ್ಥಲವೂ ಇಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ