ಭಕ್ತೆಯಾನಪ್ಪೆನಯ್ಯಾ ;
ಕರ್ತೃಭೃತ್ಯವ ನಾನರಿಯೆ.
ಮಾಹೇಶ್ವರಿಯಾನಪ್ಪೆನಯ್ಯಾ ;
ವ್ರತ ನೇಮ ಲವ ನಾನರಿಯೆ.
ಪ್ರಸಾದಿಯಾನಪ್ಪೆನಯ್ಯಾ ;
ಅರ್ಪಿತನರ್ಪಿತವೆಂಬ ಭೇದವ ನಾನರಿಯೆ.
ಪ್ರಾಣಲಿಂಗಿಯಾನಪ್ಪೆನಯ್ಯಾ ;
ಅನುಭಾವದ ಗಮನವ ನಾನರಿಯೆ.
ಶರಣೆಯಾನಪ್ಪೆನಯ್ಯಾ?
ಶರಣಸತಿ ಲಿಂಗಪತಿ ಎಂಬ ಭಾವವ ನಾನರಿಯೆ.
ಐಕ್ಯಳಾನಪ್ಪೆನಯ್ಯಾ?
ಬೆರಸಿ ಭೇದವ ನಾನರಿಯೆ.
ಚೆನ್ನಮಲ್ಲಿಕಾರ್ಜುನಯ್ಯಾ,
ಷಟ್‍ಸ್ಥಲದಲ್ಲಿ ನಿಃಸ್ಥಲವಾಗಿಪ್ಪೆನು.