ಭಕ್ತಜನ ಸಂರಕ್ಷಣ

ಭಕ್ತಜನ ಸಂರಕ್ಷಣ
ಭಕ್ತಜನ ಸಂರಕ್ಷ ಭವದುರಿತ ಸಂಹಾರಿ
ಭಕ್ತರಾ ಸುರಧೇನು – ತರುವೆ ಚಿಂತಾಮಣಿಯೆ
ಭಕ್ತರಾಧೀನನೆಂಬುವ ಬಿರುದು ಅನುಗಾಲ
ಪೊತ್ತ ತಿಮ್ಮಪ್ಪ ಏಳೊ

ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು
ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು
ಅಂಬುಜ ವಿರೋಧಿ ಕಳೆಗುಂದಿ
ತಾರಾ ನಿಕರವಂಬರದಿ ರೂಹುಮಾಸೆ
ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ
ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು
ತಾಂಬ್ರ ಚೂಡವು ಧ್ವನಿಮಾಡಿ ಕೂಗಿತು
ಸರಸಿಜಾಂಬುಕ ಮಂಚದಿಂದೇಳೊ ||1||

ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ
ಉದಧಿತೆರೆ ತÀಗ್ಗಿದುವು ಉರಗ ಪೆಡೆಯೆತ್ತಿದನು
ಗದÀಗದನೆ ನಡುಗಿ ದಾನವರು
ಭಯದಿಂದ ಅಡಗಿದರು ದಶದಿಕ್ಕಿನೊಳಗೆ
ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ
ಧಂ ಧಂ ಧಣಾ ಸರಿಗಮಪದನೀ ಯೆಂದೆನುತ
ವದರುತ್ತ ಸುಮವರ್ಷವನು ಸುರಿಸಿ
ತುರೆಸಿದರು ಸದಮಲಾನಂದ ತಿಮ್ಮಾ ||2||

ನಾರಿಯರು ಬಂದು ಅಂಗಳ ಬಳಿದು ಗಂಧದಾ
ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ-
ಸ್ತಾರದಿಂದಲಿ ಪಂಚವಣ್ಣಿಗೆಯ
ನಿಟ್ಟು ಹೊಸತೋರಣ ಮಕರ ಕನ್ನಡಿ
ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ-
ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ
ದ್ವಾರಕರು ಸಾರಿದರು ಭಟರು
ಹೊಗಳಿದರು ಕಂಸಾರಿ ಕೋನೇರಿವಾಸ ||3||

ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ
ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ
ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ
ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು
ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ
ಎತ್ತುವೆವು ಎಂದೆನುತ ಕಾದು ನಿಂದೈದಿ
ನೋಡುತ್ತಿದಾರೆ ಸರ್ವೇಶ||4||

ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ
ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ
ಆದರಿಸಿ ಪಿಡಿದ ದರ್ಪಣ ಹೇಮ ಗದ್ದುಗೆಯ
ಪಾದುಕಾ ಪಟ್ಟುವಸನ
ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು
ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು
ಕಾದು ನಿಂದೈದಾರೆ ಹೊನ್ನ ಬಾಗಿಲ
ಮುಂದೆ ಆದಿಹರಿ ಪರಮಪುರುಷ ||5||

ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ
ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು
ಹಿಂಡು ಹಿಂಡಾಗಿ ಸಮ್ಮೊಗವಾಗಿ ನಿಂದು
ಬೊಮ್ಮಾಂಡ ಕಟಹÀ ಬಿಚ್ಚುವಂತೆ
ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ
ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ-
ಮಂಡಲಾದೊಳಗೆ ಈ ಸೊಬಗು
ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ ||6||

ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ
ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ-
ಪತಿ ಸೂರ್ಯ ಅತ್ರಿ ನಂದನರು ವಾಹನವೇರಿ
ಚಿತ್ತದಲಿ ಮುಖ್ಯರಾದ
ಮೈತ್ರಾವರುಣಿ ಜಾಮದಗ್ನಿ ಕಶ್ಯಪ ವಿಶ್ವ –
ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ
ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ ||7||

ನಿಚ್ಚ ಏಳುವ ಸಮಯ ಮೀರಿತೋ ಇಂದೀಗ
ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ
ಮೆಚ್ಚುಗೊಳಿಸುತ್ತ ಬಿಗಿದಪ್ಪಿ ರತಿಕ್ರೀಡೆಯಲಿ
ಮೆಚ್ಚಿಸಿದ ಮಹಸರಸವೆ
ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ
ಕಚ್ಚಿತನ ಸೊಲ್ಲು ಕರ್ಣಕೆ ಬೀಳದಾಯಿತೆ
ಹೆಚ್ಚಿನಾ ಪದವಿ ಮತ್ತೇನು ಬಂದಿತೊ
ಕಾಣೆ ಸಚ್ಚಿದಾನಂದಾತ್ಮಕ ||8||

ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ-
ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ-
ಮುದ್ರ ರಾಣಿಯ ಪಡೆಯೊ ರಾಯರಾಯರ
ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ
ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ-
ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ
ಭದ್ರಮೂರತಿ ವಿಜಯವಿಠ್ಠಲ
ವೆಂಕಟಕಾದ್ರವೇಯ ಹಾಸಿಗೆಯಿಂದೇಳು ||9||

Leave a Comment

Your email address will not be published. Required fields are marked *