ಭಕುತ ಜನ ಮುಂದೆ ನೀನವರ ಹಿಂದೆ
ಯುಕುತಿ ಕೈಗೊಳ್ಳದೊ ಗಯ ಗದಾಧರನೆ
ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ |
ಕಟ್ಟಲೆಯಲಿ ಹರಿಗೋಲು ಹಾಕಿ ||
ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ |
ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? ||1||
ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- |
ಸ್ಸಾಳ ನಾನಾವಾದ್ಯ ಘೋಷಣಗಳು ||
ಸಾಲಾಗಿ ಬಳಿವಿಡಿದು ಸಂಭ್ರÀಮದಿ ಬರುವಾಗ |
ಆಳು ಮುಂದಲ್ಲದೆ ಅರಸು ತಾ ಮುಂದೆ?||2||
ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ |
ಸತ್ಸಂಗತಿಗೆ ಹರಿದಾಸರೆಲ್ಲ ||
ವತ್ಸಲ ಸಿರಿ ವಿಜಯವಿಠ್ಠಲ ವೆಂಕಟಾಧೀಶ
ವತ್ಸ ಮುಂದಲ್ಲದೆ ಧೇನು ತಾ ಮುಂದೆ ? ||3||