ಬಂದು ನಿಂದಿಹ ನೋಡಿ ಭೂತಳದಿ ವೆಂಕಟ
ಇಂದಿರೆಯ ಒಡಗೂಡಿ ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆನಂದಗೂಡಿ||
ವಂದಿಸುತ ಮನದೊಳಗೆ ಇವನಡಿ
ದ್ವಂದ್ವ ಭಜಿಸಲು ಬಂದ ಭಯಹರ
ಇಂದುಧರ ಸುರವೃಂದನುತ ಗೋ-
ವಿಂದ ಕರುಣಾಸಿಂಧು ಶ್ರೀಹರಿ||
ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ-
ಗಾರ ನಿಧಿ ಕೊರಳಲ್ಲಿ ಮುತ್ತಿನಲ್ಲಿ ಶೋಭಿಪ
ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ||
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲ
ಧಾರ ಭುಜ ಕೇಯೂರಭೂಷಿತ
ಮಾರಪಿತ ಗುಣ ಮೋಹನಾಂಗ||
ಚಾರು ಪೀತಾಂಬರ ಕಟೀ ಕರ-
ವೀರ ಕಲ್ಹಾರಾದಿ ಪೂವಿನ
ಹಾರ ಕೊರಳೊಳು ಎಸೆವುತಿರೆ ವದ-
ನಾರವಿಂದನು ನಗುತ ನಲಿಯುತ||
ಎಲ್ಲ ಭಕುತರಭೀಷ್ಟ ಕೊಡುವುದಕೆ ತಾ ಕೈ-
ವಲ್ಯಸ್ಥಾನವ ಬಿಟ್ಟ ಶೇಷಾದ್ರಿಮಂದಿರ
ದಲ್ಲಿ ಲೋಲುಪ ದಿಟ್ಟ ಸೌಭಾಗ್ಯನಿಧಿಗೆದು-
ರಿಲ್ಲ ಭುಜಬಲಪುಷ್ಟ ಕಸ್ತೂರಿಯಿಟ್ಟ||
ಚೆಲ್ವಫಣೆಯಲಿ ಶೋಭಿಸುವ ಸಿರಿ
ವಲ್ಲಭನ ಗುಣ ಪೊಗಳದಿಹ ಜಗ
ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾರಿ||
ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹು ಮಾಂ-
ಗಲ್ಯ ಹೃದಯನು ಸೃಷ್ಟಿಗೆ
ಉಲ್ಲಾಸ ಕೊಡುತಲಿ ಚಂದದಿಂದಲಿ||
ಪದಕ ಕೌಸ್ತುಭಧಾರ ಸರಿಗೇಯ ಕಂದರ
ಸುದರುಶನಧರ ಧೀರ ಸುಂದರ ಮನೋಹರ
ಪದಯುಗದಿ ನೂಪೂರ ಇಟ್ಟಿಹನು ಸನ್ಮುನಿ
ಹೃದಯಸ್ಥಿತ ಗಂಭೀರ ಬಹುದಾನಶೂರ||
ವಿಧಿಭವಾದ್ಯರ ಪೊರೆವ ದಾತನು
ತುದಿಮೊದಲು ಮಧ್ಯಮವಿರಹಿತನು
ಉದುಭವಾದಿಗಳೀವ ಕರ್ತನು
ತ್ರಿದಶ ಪೂಜಿತ ತ್ರಿಭುವನೇಶ||
ಸದುವಿಲಾಸದಿ ಸ್ವಾಮಿ ತೀರ್ಥದಿ
ಉದಿಸುತಿರೆ ಸಿರಿಮಹಿಳೆ ಸಹಿತದಿ
ಪದುಮನಾಭ ಪುರಂದರ ವಿಟ್ಠಲ
ಮುದದಿ ಬ್ರಹ್ಮೋತ್ಸವದಿ ಮೆರೆಯುತ||
—-ಪುರಂದರದಾಸ