ಬಂದಿಹೆ ಜನನಿ ಮರಳಿ ನೀನು
ಧರೆಯ ಪಾಪದ ಭಾರವ ಕಳೆಯೆ|
ದಗ್ಧ ಹೃದಯದ ಜ್ವಾಲೆಯನಾರಿಸೆ
ದುಃಖಿತರೆಲ್ಲರ ಕಣ್ಣೀರೊರಸೆ||
ಯುಗಯುಗದಲೂ ನೀ ಬರುವೆ ಧರೆಗೆ
ಯಾತನೆಗಳನು ಎನಿತೋ ಸಹಿಪೆ|
ಕಲ್ಲಾಗಿಹುದು ಹೃದಯವೆಮ್ಮದು
ಮರಳಿ ಮರಳಿ ಮರೆವೆವು ಧರ್ಮವ||
ಸಹನ-ಮೂರುತಿ ಸೀತೆಯ ರೂಪದಿ
ಬೋಧಿಸಿ ಅರುಹಿದೆ ಅಚಲ ಭಕ್ತಿಯ|
ರಾಧೆಯ ರೂಪದಿ ದರುಶನವಿತ್ತು
ಪ್ರೇಮದ ಮಹಿಮೆಯ ಪ್ರಚಾರಗೈದೆ||
ರಾಮಕೃಷ್ಣಲೀಲೆ ಪೂರಣಗೈಯಲು
ಎಲ್ಲರ ತಾಯಿಯು ಆಗಿ ನೀ ಬಂದಿಹೆ|
ಪಾಪಿ ತಾಪಿಗಳ ಅಪಾರ ಶರಣು
ಸರ್ವರ ಆಶ್ರಯ, ಅರ್ಹರೇ ಎಲ್ಲ! ||
ಭಯಾರ್ತ-ಭ್ರಾಂತ-ಅನಾಥರೆಮಗೆ
ಜನನಿ ಬಂದು ನೀ ಅಭಯವನಿತ್ತೆ|
ಮಾಯಾಮಾರೀಚಿಯ ದೂರವ ಮಾಡಿ
ಬೀರಿದೆ ಎಲ್ಲರ ಹೃದಯದಿ ಬೆಳಕ||