ನೋಡುವ ಕಂಗಳಿಗೆ ರೂಪಿಂಬಾಗಿರಲು
ನೀವು ಮನನಾಚದೆ ಬಂದಿರಣ್ಣಾ.
ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣಾ.
ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣಾ.
ಮೂತ್ರವು ಬಿಂದು ಒಸರುವ ನಾಳವೆಂದು
ಕಂಗಾಣದೆ ಮುಂದುಗೆಟ್ಟು ಬಂದಿರಣ್ಣಾ.
ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ ಹೋಗಲಾಡಿಸಿಕೊಂಡು
ಇದಾವ ಕಾರಣವೆಂದರಿಯದೆ,
ನೀವು ನರಕಹೇತುವೆಂದರಿತು ಮನ ಹೇಸದೆ ಬಂದಿರಣ್ಣಾ.
ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು. ಅಛೀ ಹೋಗಾ ಮರುಳೆ.