ನೋಡಿ ನೋಡಿ ಸತ್ಯಪ್ರಿಯರ ನಾ ನಿಂದು ನಿಂದು
ಪಾಡಿ ಪಾಡಿ ಯೋಗಿವರ್ಯರ ನಾ
ಪಾಡಪಂಥದಲಿ ಬಂದ ಮೂಢ ಮಿಥ್ಯಾವಾದಿಗಳ
ಓಡಿಸಿ ತನ್ನನು ಕೊಂ
ಡಾಡಿದವರ ಪೊರೆವ ಯತಿಯ
ನಾಗಸರ ನಾಗಬಂಧ ಕೊಂಬು ಕೊಳಲು
ರಾಗದಿಂದ ಪಾಡುವ ಸನಾಯಿಸುತಿಗಳು
ಬೇಗಿ ಕೂಗುವ ಹೆಗ್ಗಾಳೆ ದುಂದುಭಿ ಎಸಿಯೆ ಚತು
ಸ್ಯಾಗರ ಪರಿಯಂತ ಮೆರೆದ ಯೋಗಿಗಳಾಗ್ರಣ್ಯನ||1||
ವಾದಿಗಳೆದೆಯು ಬಿರಿಯೆ ಧವಳ ಶಂಖದಾ
ನಾದ ಒಪ್ಪ್ಪಿಸುತ್ತಿ ಮೆರೆವ ಬಿರಿದು ಸಮುದಾಯ
ವೇದ ಓದುವ ಶಿಷ್ಯರು ಮೇದಿನಿ ಸುರರು
ಬಲದಾರಿಯಲಿ ಬರೆ ಆಶೀ
ರ್ವಾದವನ್ನು ಕೊಡುವ ಧೀರನು ||2||
ವಾಜಿ ಗಜ ಪಾಯಿದಳನೇಕಸಂದಣಿ
ಯೋಜನದಗಲಕೆ ಘೋಷಣವಾಗಲು
ರಾಜಾಧಿರಾಜರು ಪೂಜೆಯನ್ನು ಮಾಡುತಿರೆ
ಈ ಜಗದೊಳಗೆ ಸಿದ್ಧ ತೇಜಪುಂಜರನ್ನ ||3||
ಬುದ್ಧಿಹೀನನಾದ ಜನರ ಉದ್ಧರಿಸುತ
ಅದ್ವೈತಮತಶಾಸ್ತ್ರ ವದ್ದು ಕಳವುತ
ಮಧ್ವಮತವ ಎಂಬೊ ಸುಧಾಬ್ಧಿಗೆ ರಾಕೇಂದುನಂತೆ
ಇದ್ದು ಭವರೋಗಳಿಗೆ ಮದ್ದು ಅಹುದೋ ಸುಗುಣದವರ||4||
ಚಂಡಮಾಯವಾದಿಗಳ ಹಿಂಡು ಬರಲಾಗಿ
ಕಂಡು ಹರುಷದಿಂದ ಸಭಾಮಂಡಿತರಾಗಿ
ಖಂಡ ತುಂಡು ಮಾಡಿ ಅವರ ದಿಂಡುಗೆಡಹಿ ಮಂಡಲಕೆ
ಪುಂಡರಿಕಾಕ್ಷನೆ ಉದ್ದಂಡನೆಂದು ಸಾರಿದರನ||5||
ಬಿಜವಾಡದಲಿ ಕೃಷ್ಣ ತಜ್ಜಲದೊಳು
ದುರ್ಜಂತುಗಳು ನರರಾ ಬೆಚ್ಚರಿಸಲು
ಪ್ರಜ್ವಲಿಸುತ ಪೋಗಿ ಮಾರ್ಜನೆ ಯನ್ನು ಗೈದು ಭೀತ
ರಾಜಝರವ ಬಿಡಿಸಿ ಕಾಯಿದ ಸಜ್ಜನರ ಮನೋಹರ ||6||
ದೇಶÀದೊಳೀ ಶೇಷವಾದ ದಾಸರ ಪ್ರಿಯ
ವಾಸ ಸಿರಿ ವಿಜಯವಿಠ್ಠಲೇಶನಂಘ್ರಿಯ ಸಾಸಿರ ದಳದ ಧ್ಯಾನ
ಮೀಸಲಾಗಿ ಮಾಡುತಿಪ್ಪ ದೋಷರಹಿತರಾದ ಸಂ
ನ್ಯಾಸ ಕುಲಭೂಷಣನಾ ||7||