ನೋಡಿ ನೋಡಿನೊ ರಂಗಾ

ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ
ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ

ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ
ಮುನ್ನೆ ದಾರಿದ್ರತನ ಯೆಣಿಸಿಕೊಳದೆ
ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ
ಬನ್ನ ಬಡುವೆನೊ ರಂಗ ನಿನ್ನ ಮೂರ್ತಿಯ ನಿತ್ಯ ||1||

ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ
ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ
ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ
ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು ||2||

ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ
ಪ್ರಖ್ಯಾತ ವೇದವೇದಾಂತ ಪ್ರೌಢ
ಸೌಖ್ಯ ಪುಸ್ತಕ ಪಾಣಿ e್ಞÁನಿ ಎನಿಸಲು ಅವಳ
ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ ||3||

ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ
ಹಾದಿಯನು ಹಿಡಿದು ಸಮೀಪ ಬರಲು
ಪಾದಕಾದರು ಬಿದ್ದು ಮಾತಾಡುವೆನೆಂಬೊ
ಮೋದವನು ತಾಳಿ ಏಕಾಂತ ಹುಡುಕುವೆ ||4||

ವಿಧವಾ ವ್ಯಾದಿಷ್ಟಾ ವ್ಯಭಿಚಾರಿ ಅಂಧಕ ಮೂಕಿ
ಬಧಿರೆ ಹೀನಾಂಗ ಅವರೋತ್ತಮ ಜಾತಿ
ವಿಧಿ ನಿಷೇಧವನು ಚಿಂತಿಸದೆ ತೀವರದಿಂದ
ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು ||5||

ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ
ಉರು ಕುಚ ಕಚ ನೋಳ್ಪ ಆಶೆಯಲ್ಲಿ
ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ
ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ ||6||

ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ
ಸನ್ನ ಮೂರುತಿ ಯೆನ್ನ ಸಾಧನವೇನೊ
ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ
ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು ||7||

Leave a Comment

Your email address will not be published. Required fields are marked *