ನೆಚ್ಚದಿರು ಸಂಸಾರ ಕಡೆಗೆ

ನೆಚ್ಚದಿರು ಸಂಸಾರ ಕಡೆಗೆ ಹಾಕುವುದಲ್ಲ
ಮಚ್ಚುಗೊಳಿಸುವುದು ವಿಷಯದಲಿ
ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ-
ಅಚ್ಯುತನ ಪಾದವನು ನಂಬೊ ಪ್ರಾಣಿ

ಪುಂಪೆಣ್ಗಳಿಂದ ಪುಟ್ಟಿದ ದೇಹವನು ತಿಳಿ
ಕೆಂಪು ಬಿಳಿದಿನ ವರ್ಣ ಮಿಳಿತ
ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ-
ಗಂಪು ನಾರುವುದು ಅದ ತೊಳೆಯದೆ ಇರಲು ||1||

ಜನಿಸಿದಾಕ್ಷಣ ಕಾಯು ಕಡಮೆಂದು ತಿಳಿಯದಲೆ
ಜನನಿ ಜನಕರು ಸುಖಿಸುತಿಹರು
ತನುಭ್ರಮಣವಲ್ಲದೆ ಚಿದ್ರೂಪ ಬಲ್ಲರೆ
ಕೊನೆಗೆ ಏನಾಗುವುದೊ ಪ್ರಾಣಿ ||2||

ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ
ಭಳಿರೆ ಇವ ಮಹಾತ್ಮನೆಂದು
ಘಳಿಗೆ ತೊಲಗಲು ಧನವು ಕರಗಿ ತಿಂದು ಪೋಗಿ
ಹಳಿದು ಹಲ್ತೆರೆದು ಅಣಕಿಪರೋ-ಪ್ರಾಣಿ ||3||

ಹುಬ್ಬಿನಿಂದಲೆ ಹೊಡೆದು ಹೃದಯದ ಕಗ್ಗಂಟು
ಕಬ್ಬು ಕಾರ್ಮುಕನಿಂದ ಬಿಡಿಸಿ
ಉಬ್ಬಿಸ್ಯುಕ್ಕಿನ ತಂತಿಯಂತೆ ಮಾತುಗಳಾಡಿ
ಉಬ್ಬಸವ ಬಡಿಸುವಳೊ ನಾರಿ ಪ್ರಾಣಿ ||4||

ಯೌವನವೊದಗಿದಾಗ ಏನೆಂದರೂ ಅಪ್ಪ
ಅವ್ವಣ್ಣನೆಂದು ನಸುನಗುತ
ಗವ್ವಳಿಕೆ ವೃದ್ಧಾಪ್ಯ ಬಂದೊದಗಲು ಇವನ
ಬವ್ವನ ತೆರೆದಲಾಡಿಪರೋ-ಪ್ರಾಣಿ ||5||

ನಿಷ್ಠಕ್ಕೆ ದೇಹವನು ಮಾಡಿಕೊಂಡಂತೆ ನೀ
ದುಷ್ಕರ್ಮಕೊಳಗಾಗದಿರೆಲೋ
ನಿಷ್ಕಂಟಕವಾದ ಮಾರ್ಗದಲಿ ನರಹರಿಯ
ನಿಷ್ಕಾಮದಲಿ ಭಜಿಸೊ ಮನವೆ ಪ್ರಾಣಿ ||6||

ಅಂ¨ಲಿಗೆ ಗೃಹಪಾಲ ಮನೆ ಮುಂದೆ ಹಗಲಿರುಳು
ಹಂಬಲಿಸಿ ಬಿದ್ದಂತೆ ನೀನು
ಉಂಬ ವಿಷಯಂಗಳಿಗೆ ಕವಿ ಜೋತು ಬಿದ್ದು ಈ
ಡಿಂಬವನು ಪೋಷಿಸದಿರೆಲವೊ-ಪ್ರಾಣಿ ||7||

ದೇಹಕ್ಕೆ ಬಲವಾಗಬೇಕೆಂದು ಎಲ್ಲರೊಳು ಕಂಡಲ್ಲಿ
ಸ್ನೇಹಭಾವವನ್ನು ಬಯಸಿ
ಆಹಾರಗಳ ತಿಂದು ಕಾಯ ಪುಷ್ಟಿಯಿಂದ
ಮೋಹಕ್ಕೆ ಒಳಗಾದೆಯಲ್ಲೋ-ಪ್ರಾಣಿ||8||

ಸ್ವಲ್ಪ ದಿನವುಳಿಯಿತು ಒಂದು ಸಾಧನ ಕಾಣೆ
ಕಲ್ಪಾಯು ನಿನಗಿಲ್ಲವಲ್ಲೊ
ಬಲ್ಪಂಥಗಳ ಮಾಡಿ ಭೋಗಪಡದಿರು ನಾಗ-
ತಲ್ಪನ್ನ ಮೊರೆಹೋಗಲೋ-ಪ್ರಾಣಿ||9||

ದೇಶ ದೇಶವ ತಿರುಗಿ ಬಳಲಿ ಬಾಯಾರಿ ನೀ
ಕ್ಲೇಶಕೊಳಗಾಗಿ ಹೊನ್ನುಗಳ
ಏಸೇಸು ತಂದದ್ದು ಏನಾಯಿತೋ ಒಂದು-
ಕಾಸು ನಾಳೆಗೆ ಕಾಣೆಯೋ-ಪ್ರಾಣಿ||10||

ಎಂದಿಗಾದರೋ ಇದೇ ಸಂಸಾರ ವಿಸ್ತಾರ
ಒಂದಕ್ಕೆ ಒಂದೊಂದು ಅಧಿಕ
ಬಂಧನವಲ್ಲದಲೆ ಲೇಶ ನಿರ್ಮಲ ಕಾಣೆ
ಪೊಂದು ಸಜ್ಜನರಲ್ಲಿ ಮಂದ-ಪ್ರಾಣಿ||11||

ನಿತ್ಯ ಗಂಡಾಂತರದಿ ಬಿದ್ದು ಸಕಲಕ್ಕೆ
ಕರ್ತೃ ನಾನೆಂದು ಕೂಗುವಿಯಲೊ
ಮೃತ್ಯು ನಗುವುದು ನಿನ್ನ ಹೆಡತಲೆಯಲಿ ನಿಂದು
ಚಿತ್ತದಲ್ಲಿ ತಿಳಿದು ತಲೆ ಬಾಗೊ-ಪ್ರಾಣಿ ||12||

ದೊಡ್ಡವನು ನಾನು ಎನಗೆಲ್ಲ ಜನರು ಬಂದು
ಅಡ್ಡಬೀಳುವರೆಂಬ ಮಾತು
ಹೆಡ್ಡತನ ತಾಳದಿರು ಕೊನೆಗೆ ಅನುಭವಕ್ಕು
ಕಡ್ಡಿಯಂದದಿ ಮಾಳ್ಪರೋ-ಪ್ರಾಣಿ ||13||

ಕೋಟಿಯಾದರು ಕೇಳು ಅವರೋಕ್ಷಿಗಾದರೂ
ಕೋಟಲೆಯೊಳಿರದೆ ಗತಿಯಿಲ್ಲ
ತಾಟತೂಟಕ ಮಾಡಿ ಅವರಂತೆ ನುಡಿದು ಭವ
ದಾಟಬೇಕೋ ಬೇಗ ಜಾಣ-ಪ್ರಾಣಿ||14||

ಆದರಿಸಿ ಸತಿಸುತರು ಬಂಧು ಬಳಗಕ್ಕೆ ಸಂ
ಪಾದಿಸಿ ಧನ ಧಾನ್ಯ ತಂದು
ಮೋದಪಡಿಸುವೆನೆಂದು ವಾದಿಸುವ ಮನುಜನ್ನ
ಪಾದಕ್ಕೆ ಶರಣು ಸಾರೆಲವೋ-ಪ್ರಾಣಿ ||15||

ವನಧಿಯೊಳು ಸಪ್ತದ್ವೀಪದ ಮೃತ್ತಿಕೆ ಹಾಕೆ
ದಣುವಿಕ್ಯಲ್ಲದೆ ಪೂರ್ಣವಹುದೆ
ಇನಿತು ತಿಳಿಯೆಲ್ಲೆಲ್ಲಿ ತಂದ ಧನದಿಂದ ಭವ-
ವನಧಿ ತುಂಬದು ಕಾಣೊ ಮರುಳೆ-ಪ್ರಾಣಿ 16

ಚಿತ್ರಗುಪ್ತರು ನಿತ್ಯ ಬರೆದ ಲೆಖ್ಖವು ದಿವಾ
ರಾತ್ರಿ ನೋಡುತಲಿದ್ದು ನಿನ್ನ
ಪತ್ರ ಕರದಲಿ ಪಿಡಿದು ಈ ಮೂರ್ಖ ನರಮಹಿಷ-
ಪುತ್ರನೆಂದು ನಸುನಗುವರಲ್ಲೋ-ಪ್ರಾಣಿ ||17||

ಎನಗೆ ತನಗೆಂದು ಯಮಭಟರು ಕರಗಳ ಹೊಯಿದು
ಕಣಿದು ಭುಜ ಚಪ್ಪರುಸುತಿಹರೊ
ಅನಿತರೊಳಗೆಚ್ಚರಿಕೆ ಎಚ್ಚತ್ತು ಹರಿಚರಣ
ವನಜ ಧಾನ್ಯವ ಒಲವು ಮಾಡೊ-ಪ್ರಾಣಿ ||18||

ಶ್ರುತಿಗೆ ಅಪ್ರಾಮಾಣ್ಯ ಬಾರದಂತೆ ಮಧ್ವ
ಮತಕೆ ವಿರೋಧವಾಗದಂತೆ
ಕ್ಷಿತಿಯೊಳಗೆ ಸುಜನರಿಗೆ ಹಿತವಾಗುವಂತೆ ಶ್ರೀ-
ಪತಿಯ ಸೇವಿಸಿ ಸುಗತಿ ಪಡೆಯೋ-ಪ್ರಾಣಿ ||19||

ಅರ್ಥಬಾರದು ನಿನ್ನ ಸಂಗಾತ ಕೇಳ್ ಕೊನೆಗೆ
ವ್ಯರ್ಥಧಾವತಿ ಪ್ರಾಪ್ತಕರ್ಮ
ತೀರ್ಥಯಾತ್ರೆಯ ಮಾಡಿ ನಿಸ್ಸಂಗನಾಗು ಯ_
ಥಾರ್ಥಾ e್ಞÁನದಿಂದ ಬಾಳೊ ಪ್ರಾಣಿ||20||

ಶಿಥಿಲವಾಗಿ ಪೋಪ ದೇಹಕೆ ಮಮತಿಂದ
ಮಿಥುನ ಭಾವಗಳನ್ನೆ ಬಯಸಿ
ವ್ಯಥೆಪಟ್ಟು ಪಥತಪ್ಪಿ ನಡೆದು ನರಹರಿ ಸುಗಣ
ಕಥೆಗೆ ವಿಮುಖನಾಗದಿರೆಲೊ-ಪ್ರಾಣಿ ||21||

ವನಗಿರೀ ನದಿ ಮೆದೆ ಹೊದರು ಗಹ್ವರ ಹುತ್ತ
ವನರಾಶಿ ದ್ವೀಪ ಪಾತಾಳ
ತನು ಮತ್ರ್ಯ ಸುರಲೋಕ ಜನನಿ ಜಠರದೊಳಿರಲು
ಅಣು ಮಾತ್ರ ತಪ್ಪುವುದೆ ಬರಹ ಪ್ರಾಣಿ ||22||

ಹಲವು ಹಂಬಲ ಸಲ್ಲ ಆದ್ಯಂತಕಾಲದಲಿ
ಗಳಿಸಿಕೋ ಪೂರ್ಣಾಯು ವಾಯು
ಒಲಿಯದಲೆ ನಿನ್ನೊಳಗೆ ವಿಜಯವಿಠ್ಠಲರೇಯ
ಸುಳಿಯ ಜಾಗ್ರತನಾ ಗೆಲೋ ಪ್ರಾಣಿ ||23||

Leave a Comment

Your email address will not be published. Required fields are marked *