ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ ಪ್ರ
ಸನ್ನ ವದನ ಭುಜಗನ ಗಿರಿಯ ತಿಮ್ಮಾ
ಪೊಳೆವ ಕಿರೀಟಕುಂಡಲ ಕರ್ಣ
ಪಣೆಯಲ್ಲಿ ತಿಲಕ ಬಿಲ್ಲಿನ ಪುಬ್ಬು
ಸುಳಿಗೂದಲಿಂದೊಲಿವ ||1||
ಕದಪು ಕೂರ್ಮನಂತೆ ಸುಧೆಯ ಸುರಿವ ವದನ
ಅಧರ ನಾಸಿಕ ಕಪೋಲ
ಮುದ್ದುನಗೆಯಿಂದೊಲಿವ||2||
ಕೊರಳ ತ್ರಿರೇಖೆ ಉಂಗುರ
ಬೆರಳ ಶಂಖ ಸುದರಶನ ಕಟಿ ಅಭಯ
ಕರ ಚತುಷ್ಟಯಿಂದೊಲಿವ||3||
ಶ್ರೀವತ್ಸ ಕೌಸ್ತುಭ ನ್ಯಾವಳ ವೈಜಯಂತ
ಆವಾವಾಸರ ಉದರ
ತ್ರಿವಳಿಯಿಂದೊಲಿವಾ||4||
ಬಡ ನಡು ನಾಭಿಯು ಉಡುದಾರ ಪೊಂಬಟ್ಟೆ
ಉಡಿಗೆ ಕಿಂಕಿಣಿಗಂಟಿ
ನುಡಿ ತೊಡರಿಂದೊಲಿವಾ ||5||
ಊರು ಜಾನು ಜಂಘೆ ಚಾರುಪೆಂಡೆ ನೂಪುರ
ಭೋರಗರೆವ ಗೆಜ್ಜೆ
ತೋರುತ್ತ ನಲಿದೊಲಿವಾ ||6||
ಧ್ವಜ ವಜ್ರಾಂಕುಶ ಸರ
ಸಿಜ ರೇಖಿಯ ಚರಣ
ವ್ರಜನಂದ ಬಾಲಕ ವಿಜಯವಿಠ್ಠಲ ತಿಮ್ಮಾ ||7||