ನಿನ್ನ ಮರೆದೆನೊ ರಂಗ

ನಿನ್ನ ಮರೆದೆನೊ ರಂಗ ನಿನ್ನ ಮರೆದೆ
ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ

ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ
ನಾಟುವುದು ಅವರ ಕಡೆ ಅನುರಾಗದಿ
ನೀಟಾದ ಭೋಜನವ ಬಯಸುವೆನು ಯಮರಾಯ
ಪಾಟು ಬಡಿಸುವ ಭಂಗ ಕೇಳಿ ಎಚ್ಚರಿಯದಲೆ||1||

ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ
ಹೊತ್ತು ಹೊತ್ತಿಗೆ ಅವರ ಕೊಂಡಾಡುತ
ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು
ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ||2||

ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ
ಬಿಡದೆ ಮಾಡಿದ ಪುಣ್ಯಪಾಪಗಳೆದು
ಎಡಬಲದವರ ಪಙÉ್ತ ನೋಡಿಕೊಳ್ಳುತ ದುಃಖ
ಪಡುವೆನೋ ಎನಗಿಷ್ಟು ಕಡಿಮೆ ಹಾಕಿದರೆಂದು||3||

ಅನ್ನವಿತ್ತವನ ಪಾಪಗಳು ನಿರಂತರದಿ
ಅನ್ನದಾಶ್ರಯ ಮಾಡಿಕೊಂಡಿಪ್ಪವು
ಚೆನ್ನಾಗಿ ತಿಳಿಯದಲೆ ಚಾತುರ್ಯದಿಂದಲಿ
ಧನ್ಯನಾದೆನು ನಾನು ಪರರ ಪಾಪವ ಭುಜಿಸಿ ||4||

ಒಬ್ಬರೆಡೆ ನೋಡಿಕೊಳಲಧಿಕವಾಗಿದ್ದರೆ
ಉಬ್ಬುವೆನು ಊರು ಕೇರಿ ಹಿಡಿಸದಂತೆ
ಸುಬ್ಬನ ಸೂರೆಯಂತೆ ಪರರ ಅನ್ನವನುಂಡು
ಮೊಬ್ಬಿನಲಿ ದಿನಗಳೆದೆ ದೀನ ಮನಸಿನಲಿ ||5||

ಒಡಲಿಗೆ ಬಿದ್ದರಸ ಮೂರು ಭಾಗಗಳಾಗಿ
ಕಡೆಗೆ ಪೋಗುವುದೊಂದು ನಿಲುವುದೊಂದು
ತಡೆಯದಲೆ ಸಂತಾನ ಪಡೆವುದೊಂದೀತೆರ
ಕಡೆಗಾಣಲಿಲ್ಲ ಪರರಲಿ ಉಂಡ ಋಣಕೆ||6||

ಆವಾವ ಬಗೆರುಚಿ ಜಿಹ್ವಗೆ ತೋರುತಿದೆ
ಆವಾವ ಬಗೆ ನರಕ ಬೇರೆಯುಂಟು
ದೇವ ಮಣಿ ಸರ್ವೇಶ ವಿಜಯವಿಠ್ಠಲ ಸ್ವಾಮಿ
ಈ ಜೀವ ಹಿತವಾಗುವಂತೆ ಮಾರ್ಗವ ತೋರು ||7||

Leave a Comment

Your email address will not be published. Required fields are marked *