ಜರಿಯಬೇಡ

ಜರಿಯಬೇಡ ಹರಿಯ ಮರೆಯಬೇಡೆಂದೆಂದು |ತಿರಿಯಬೇಡ ಖಳರ ಮನೆಗೆ ಪೋಗಿ
|ಒರೆಯಬೇಡನ್ಯರಿಗೆ ರಹಸ್ಯ ತತ್ವಗಳನು |ಬೆರೆಯಬೇಡ ಪರರ ಸತಿಯ ಸ್ವಪ್ನದಲೂ

ಮೂಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ |ಶ್ರೀಕಾಂತ ಚರಿತೆಯನು ಕೇಳದಿರಬೇಡ
|ಪಾಕವನು ಮಾಡಿ ಏಕಾಂಗಿಯಾಗುಣಬೇಡ|ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||1||

ಪಂಡಿತರು ಪಾಮರರು ಆರಿಗಾದರೂ ನಿನ್ನ |ಕಂಡವರಿಗೆಲ್ಲ ಕೌತುಕವು ತೋರಿದರೂ
|ಹೆಂಡಿರು ಮಕ್ಕಳು ಅಳಿಯ ಸೋಸೆ ಮೊಮ್ಮಕ್ಕಳು |ಉಂಡುಟ್ಟು, ದ್ವಿಜರು ಸಹ ಗಂಡುಗಲಿಯಾದರೂ||2||

ಮಂದಮತಿಗಳ ಕೂಡೆ ಮಾತಾಡಲಿ ಬೇಡ |ನಿಂದಕರ ಕಣ್ಣೆತ್ತಿ ನೋಡಬೇಡ
|ಇಂದಿರೆಯರಸ ಶ್ರೀ ವಿಜಯ ವಿಠಲರ ಚರಣ|ದ್ವಂದ್ವದಲಿ ಮಸ್ತಕವನಿಡದಿರಬೇಡ ||3||

Leave a Comment

Your email address will not be published. Required fields are marked *