ಚಿರಂಜೀವಿಯಾಗಿರೆಲೊ ಚಿಣ್ಣ ನೀನು
ಪರಮ ಭಾಗವತರ ಪದಧೂಳಿ ಧರಿಸುತಲಿ
ಜರಿಯಬೇಡ ಹರಿಯ ಮರೆಯಬೇಡೆಂದೆಂದು
ತಿರಿಯಬೇಡ ಖಳರ ಮನೆಗೆ ಪೋಗಿ
ಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನು
ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||1||
ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ
ಶ್ರೀ ಕಾಂತ ಚರಿತೆಯನು ಕೇಳದಿರಬೇಡ
ಪಾಕವನು ಮಾಡಿ ಏಕಾಂಗಿಯಾಗುಣಬೇಡ
ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||2||
ಸಾಲ ಮಾಡಲಿ ಬೇಡ ಸಾಲದೆಂದೆನಬೇಡ
ನಾಳೆಗೆ ಹ್ಯಾಗೆಂಬ ಚಿಂತೆ ಬೇಡ
ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ
ಬಾಳುವರ ಸಂಗದಲಿ ಬಾಳೆಲವೊ ಬಾಲ ||3||
ಪಂಡಿತರು ಪಾಮರರು ಆರಿಗಾದರೂ ನಿನ್ನ
ಕಂಡವರಿಗೆಲ್ಲ ಕೌತುಕ ತೋರಲಿ
ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು
ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ ||4||
ಮಂದಮತಿಗಳ ಕೂಡೆ ಮಾತಾಡಲಿ ಬೇಡ
ನಿಂದಕರ ಕಣ್ಣೆತ್ತಿ ನೋಡಬೇಡ
ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ
ದ್ವಂದ್ವದಲಿ ಮಸ್ತಕವ ನೀಡದಿರಬೇಡ||5||