ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು |
ಚಂದದಿಂ ದ್ವಾದಶಿ ಸಾಧನೆ ಬರಲು
ಅಂದದಿಂದ ಪುರಂದರದಾಸರಿ |
ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ
ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ
ಜಪಮಂತ್ರ ಹರಿಪೂಜೆಯನೆ ಮಾಡಿ ||
ಧಳಥಳಿಸುವ ವಿಠಲನ ದಿವ್ಯ ಪಾದ
ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ ||1||
ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ |
ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ ||
ಥಟ್ಟನೆ ವೇದಕ್ಕೆ ಸಮನಾದ ಪದಗಳು |
ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು||2||
ಎಡೆಯೊಳು ಷಡ್ರಸದನ್ನವ ನೀಡೆ | ಕಡು ಮಮತೆಗಳಿಂದ |
ಬಿಡದೆ ದಾಸರ ದಾರಿಯ ನೋಡಿ ||
ಯೆಡ ಬಲದಷ್ಟ ದಿವ್ಯದಿಂಡೆಯರೆಲ್ಲಾ |
ಕಡೆಯದೆಶೆ ಧರಿಸಿದರು ದಾಸರಾ ||3||
ಹಗಲು ಒಂಭತ್ತು ತಾಸಾಗಿರಲು |
ಆಗೆದ್ದು ಬೇಗ ಗುರುಗಳ ಸಮೀಪಕ್ಕೆ ಬರಲು ||
ಮುಗಿದು ಕರಯುಗ್ಮವ ಬಗೆ ಬಗೆ ಸ್ತುತಿಸುತಾ |
ಜಗದೊಳು ನಾನಪರಾಧಿಯೆಂದರೂ ||4||
ಭೋಜನವ ಮಾಡಿ ಗುರುಗಳಂದು ಸಿಂಹಾಸನದಲ್ಲಿ |
ರಾಜಿಸುತ್ತ ಬಂದು ಕುಳಿತಿರಲಂದೂ ||
ಆ ಜನದೊಡಗೀ ದಾಸರು ಕರೆಯಲು |
ನೈಜಭಾವದಿಂದು ಬಂದು ಕುಳಿತರೂ ||5||
ಪದಗಳು ಬರದ ವಹಿಯಕೊಂಡು ಪೋಗಿ |
ಮಧ್ವಶಾಸ್ತ್ರದ ಮೇಲೆ ಕುಳ್ಳಿರಲಾಗ ||
ಅದನರಿಯದೆ ದಿಂಡೆಯನೊಬ್ಬನು ಆ |
ಪದವಹಿಯ ತೆಗೆದು ಬಿಸುಟನಾಗಾ ||6||
ಯೆರಡಾವರ್ತಿ ತೆಗೆಯಲು ಆಗ |
ತಿರುತಿರುಗಿ ಬಂದು ವರಪುಸ್ತಕದ ಮ್ಯಾಲೆ ಕುಳ್ಳಿರಲಂದೂ ||
ಗುರು ವ್ಯಾಸರಾಯರು ನೋಡಿ ಹರುಷದಿಂದ |
ಕರೆದು ಬೈದರವಗೆ ಕಡು ಮೂರ್ಖನೆಂದೂ ||7||
ಪದದೊಹಿ ತೆಗೆದು ಬಿಸಾಡಿದರೆ ತಿರುತಿರು
ಗ್ಯದರಮ್ಯಾಲೆ ವರನಾಲ್ಕು ವೇದಾರ್ಥದರೊಳಗುಂಟು ||
ನರರುತ್ತಮರೆಲ್ಲ ನೋಡಿ ಹರುಷದಿಂದ |
ಧರೆಯೊಳು ಪುರಂದರ ಉಪನಿಷತ್ತೆಂದರೂ ||8||
ಗುರುರಾಯರು ದಾಸರ ನೋಡಲಾಗ ಭರದಿಂದ ಯೆದ್ದು |
ಅರಿವೆಯ ಕೈಯಿಂದೊರಸಲು ಆಗ ||
ತ್ವರಿತದಿ ಕೇಳಲು ವಿಠಲನ ಗುಡಿಯೊಳು |
ಪಡದಗುರಿ ಹತ್ತವು ವರಿಸಿದೆವೆಂದರು ||9||
ಹಾಗೆಂದು ನುಡಿದಾಕ್ಷಣದಲಿ ಬೇಗ ಶಿಷ್ಯರಿಗೆ |
ಹೋಗಿ ನೋಡಿ ಬಾರೆಂದೆನಲಾಗಿ ||
ಬೇಗದಿಂದಲಿ ಬಂದು ಕೇಳಲು ಅವರು |
ಈಗ ದಾಸರು ಬಂದು ಪರಿಹರಿಸಿದರೆಂದು ||10||
ಆ ಮಾತು ಕೇಳಿದಾಕ್ಷಣದಿ ಬೇಗ |
ಪ್ರೇಮದಿ ಬಂದು ಸ್ವಾಮಿರಾಯರಿಗೆ ಪೇಳಲು ಆಗ ||
ನಾಮವ ಸ್ಮರಿಸುತ ಪ್ರೇಮಾಲಿಂಗನವಿತ್ತು |
ಕಾಮಿತಾರ್ಥ ಫಲವೀವ ಕಲ್ಪತರುವೆಂದರೂ ||11||
ಇಂತು ಅನುಭವ ಮಾತುಗಳನಾಡಿ ಲಕ್ಷ್ಮೀಕಾಂತನ |
ಅಂತರಂಗದಲಿ ಅತಿಮಾನವ ಮಾಡಿ ||
ಕಾಂತಿ ಹೆಚ್ಚಿದ ಕಂತುಪಿತನ ಮೂರ್ತಿ |
ಶಾಂತತ್ವದಿ ನೋಡುತ ಶರಣು ಮಾಡಿದರೂ ||12||
ಗಜಪುರದಲ್ಲಿ ಇರುವರು ಕೂಡಿ ವಿಜಯವಿಠ್ಠಲನ್ನ |
ಭಜನೆಯಿಂದ ದಿನ ದಿನ ಪೊಗಳಿ ||
ತ್ರಿಜಗದೊಡೆಯ ಗುರು ಪುರಂದರವಿಠಲನ |
ನಿಜ ವೈಕುಂಠದ ಮುಕ್ತಿಯೈದಿದರೂ ||13||