ಇಂದು ನೋಡಿದೆ ಗೋವಿಂದನಾ ಸರ್ವ
ಸುಂದರಸಾರ ವೆಂಕಟ ರಮಣನಾ
ಭಾಗೀರಥಿಯ ಪೆತ್ತವನಾ ಭವ
ರೋಗವ ಕಳೆವ ರಾಜೀವನೇತ್ರನಾ
ಸಾಗರದೊಳಗೆ ಒಪ್ಪುವನಾ ಭಕ್ತ
ಕೂಗಲು ನಿಲ್ಲದೆ ಒದಗಿ ಬರುವನಾ||1||
ನಿಲ್ಲದೆಳಿಪಿಗೆ ಪೊಳೆದನಾ ಗೋ
ಪಾಲಕರಿಗೆ ವೈಕುಂಠ ತೋರಿದನಾ
ನೀಲಾದೇವಿಗೆ ಬಲಿದವನಾ ಭೂ
ಪಾಲಗೆ ಮೆಚ್ಚಿ ಸತ್ವರವನಿತ್ತವನಾ||2||
ವಿಶ್ವ ಮಂಗಳದಾಯಕನಾ ಅಹಿ
ವಿಷ್ಟಕಸೇನರಿಂದ ಪೂಜೆಗೊಂಬುವನಾ
ವಿಶ್ವರೂಪ ವಿಲಕ್ಷಣನಾ ಸರ್ವ
ವಿಶ್ವ ಪರಿಪಾಲ ಪ್ರಣತಾರ್ತಿ ಹರನ||3||
ಸುರ ಶಿರೋಮಣಿ ಸದ್ಗುಣನಾ ಸು
ದರಶನ ಶಂಖ ಭಜಕರಿಗೆ ಕೊಟ್ಟವನಾ
ನಿರುತ ಆನಂದ ಭರಿತನಾ ದಿವ್ಯ
ಮಿರುಗುವಾಭರಣದಿಂದಲಿ ನಿಂದಿಹನಾ ||4||
ಶಾಮವರ್ಣ ಚತುರ್ಭುಜನಾ ನಿಜ
ಕಾಮಿನಿ ಸಂಗಡ ನಲಿದಾಡುವನಾ
ಹೇಮ ಗಿರಿಯಲಿದ್ದವನಾ ದೇವ
ಸ್ವಾಮಿ ತೀರ್ಥವಾಸ ವಿಜಯವಿಠ್ಠಲನಾ||5||