ಅಯ್ಯಾ, ಸರ್ವಮೂಲಹಂಕಾರವಿಡಿದು

ಅಯ್ಯಾ, ಸರ್ವಮೂಲಹಂಕಾರವಿಡಿದು
ಕುಲಭ್ರಮೆ ಲಭ್ರಮೆ ಜಾತಿಭ್ರಮೆ,
ನಾಮ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ.

ತರ್ಕಭ್ರಮೆ ರಾಜ್ಯಭ್ರಮೆ, ಧನ ಧಾನ್ಯ ಪುತ್ರ ಮಿತ್ರಭ್ರಮೆ,
ಐಶ್ವರ್ಯ ತ್ಯಾಗ ಭೋಗ ಯೋಗಭ್ರಮೆ,
ಕಾಯ ಕರಣ ವಿಷಯಭ್ರಮೆ,
ವಾಯು ಮನ ಭಾವ ಜೀವ ಮೋಹಭ್ರಮೆ.

ನಾಹಂ ಕೋಹಂ ಸೋಹಂ ಮಾಯಾಭ್ರಮೆ ಮೊದಲಾದ
ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು
ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ
ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ
ನಾಚಿನಿಮ್ಮಡಿಗಭಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ.

Leave a Comment

Your email address will not be published. Required fields are marked *