ಅಕ್ಕಟಕ್ಕಟಾ, ಸಂಸಾರದ ಹಗರಣ ಬಂದಾಡಿತ್ತಲ್ಲಾ ?
ಅಪ್ಪಾ ಬೊಪ್ಪಾ ಎಂಬ ಚೋಹವು
ಅದು ಮೊಟ್ಟಮೊದಲಲ್ಲಿ ಬಂದಾಡಿತ್ತು.
ತುಪ್ಪುಳು ತೊಡೆದಂತೆ ಮೀಸೆಯ ಚೋಹವು
ಅದು ನಟ್ಟನಡುವೆ ಬಂದಾಡಿತ್ತು.
ಮುಪ್ಪು ಮುಪ್ಪು ಎಂಬ ಚೋಹವು
ಅದು ಕಟ್ಟಕಡೆಯಲಿ ಬಂದಾಡಿತ್ತು.
ನಿಮ್ಮ ನೋಟವು ತೀರಲೊಡನೆ
ಜಗದಾಟವು ತೀರಿತ್ತು ಕಾಣಾ ಚೆನ್ನಮಲ್ಲಿಕಾರ್ಜುನಾ.