ಹರಿಹರ ಸಲಹಯ್ಯಾ ಪರಮ

ಹರಿಹರ ಸಲಹಯ್ಯಾ ಪರಮ
ಕರುಣವ ಮಾಡಿ ಶರಣು ಹೋ |
ಶರಣು ಹೋಗುವೆ ನಿಮ್ಮ ಚರಣ ಕಮಲಕೆ |
ಎರವು ಮಾಡಿದೆ ನಿರುತಾ

ಮೂರು ನಗರ ದಹನಾ | ತಾರಕ್ಷ ವಾಹನಾ |
ತರುಣ ಚರ್ಮಾಂಬರ ಪೀತಾಂಬರಧರ ಶ್ರೀ ಸತಿರಮಣಾ |
ಚಾರು ಚಂದ್ರಮೌಳಿ | ಶೌರಿ ಕೌಸ್ತುಭಮಾಲಾ |
ಮಾರಜನಕ ಕು | ಮಾರನಪಿತ ಗಂಗಾಧರ ಧರ ಧರ||1||

ಶೂಲ ಡಮರುಗ ಹಸ್ತ | ಮೂಲೋಕ ಮೀರಿದವಸ್ತಾ |
ಕೈಲಾಸವಾಸ ವೈಕುಂಠ ಪುರಾಧೀಶ ಕಾಲಾ ಕಾಲ ನಿಯಾಮಕ |
ತ್ರಿಲೋಚನ ಕಮಲಾಕ್ಷಾ | ನೀಲಕಂಧರ ನಿತ್ಯ |
ಪಾಲಸಾಗರಶಾಯಿ ನಂದಿಗಮನ ಕಾ | ಪಾಲಿ ಅಭಯ ಪಾಣಿ ||2||

ಭಸಿತ ಭೂಷಿತ ರುದ್ರ | ಎಸವ ಗುಣ ಸಮುದ್ರ
ವಿಷಧರ ಭೂಷಣ ಕಸ್ತೂರಿ ತಿಲಕ ರಂ |
ಜಿಸುವ ಜಡೆಮುಕುಟ | ಪಶುಪತಿ ಪಿನಾಕಿ |
ಅಸುರಾರಾತಿ ವಿವೇಕಿ |
ಅಸಮ ಸುದರುಶನ ರುಂಡಮಾಲಾಧೀಶ ಪಾಲ ಗೋಪಾಲ ||3||

ಭೂತ ಪ್ರಮಥರೊಡೆಯಾ | ಭೂತೇಶಾದಿಗಳೊಡೆಯಾ |
ಶ್ವೇತ ಶರೀರ ನೀಲ | ಗಾತುರ ಸದ್ಯೋಜಾತಾ ಜಾತರಹಿತಾ |
ಜ್ಯೋತಿರ್ಮಯರೂಪಾ | ಭೀತಿ ಶೂನ್ಯ ಪ್ರತಾಪಾ |
ಆತುಮ ಅಂತರಾತುಮ ಪರಮೇ |
ಶ ತಾಮಸ ಖ್ಯಾತಿ ಮಂಗಳಕೀರ್ತಿ ||4||

ತಂತ್ರ ಮಂತ್ರಕ್ಕೆ ಸಿಲುಕಾ | ಅಂತರಂಗ ನಿಯಾಮಕಾ |
ಎಂತೆಂತು ತಿಳಿದರೆ | ಅಂಥಂಥ ಗತಿಯನ್ನು |
ಸಂತತ ಕೊಡುವನೆ ಚಿಂತಿಪೆ ವರಹನ್ನ | ದಂತಜ ತೀರದಲ್ಲಿ |
ನಿಂತು ವರವನೀವ | ವಿಜಯವಿಠ್ಠಲ ಗುಹಾ
ಕಾಂತಾರ ನಿವಾಸಾ ||5||

Leave a Comment

Your email address will not be published. Required fields are marked *