ಸಂತರನ ಸ್ಮರಿಸಿ ಜನರು
ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ
ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ
ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ
ಕುಂತುಪಿತನೊಲಿಮೆಯಿಂದ
ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ
ಲೇಸು ಪಂಕಜನಾಭ ನರಹರಿ ಮಾಧವ ಮು
ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ
ಪೋಷಿತ ಕವೇಂದ್ರತೀರ್ಥರಾ
ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ
ಭಾಸುರ ವಿದ್ಯಾನಿಧಿ ರಘುನಾಥ ರಘುವರ್ಯ
ಭೂಷಣ ಮತಕೆ ರಘೋತ್ತಮ ನಿಧಿವೇದ
ವ್ಯಾಸ ವಿದ್ಯಾಧೀಶರೂ ||1||
ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ
ಬೋಧ ಮೂರುತಿ ಸತ್ಯನಾಥ ಸತ್ಯಾಭಿನವ
ಕ್ರೋಧ ಜಯ ಸತ್ಯಪೂರ್ಣ ಸತ್ಯ ವಿಜಯ ವಿ
ನೋದ ಸತ್ಯಪ್ರಿಯರೂ
ಭೇದಾರ್ಥ ಬಲ್ಲ ವಿಭುಧೇಂದ್ರ ರಘುತನಯ ಸ
ಮ್ಮೋದ ಜಿತಾಮಿತ್ರ ತೀರ್ಥ ಮುನಿಪ ಸುರೇಂದ್ರ
ವಾದಿ ಎದೆ ಶೂಲ ವಿಜಯೀಂದ್ರ ಸುಧಿಯೀಂದ್ರ ಹ
ಲ್ಲಾದ ರಾಘವೇಂದ್ರರು ||2||
ಯೋಗೆಂದ್ರ ಭೂಸುರೇಂದ್ರ ಸುಮತೀಂದ್ರ ಉಪೇಂದ್ರ
ಯೋಗಿ ಶ್ರೀಪಾದರಾಯರ ಪೀ
ಳಿಗೆಯ ಅತಿ ಸಾಧನವು ವ್ಯಾಸರಾಯರ ಪಾರಂಪರಿಯವ ಲೇ
ಸಾಗಿ ಎಣಿಸಿ ಕೊಂಡಾಡಿ
ಆಗಮನುಕೂಲ ಮಧ್ವ ಶಾಸ್ತ್ರವನುಸರಿಸಿ
ವೇಗದಿಂದಲಿ ಮಹಸಂತರಿಗೆ ಶಿರ
ವಾಗಿ ಭವದಿಂದ ಕಡೆ ಬಿದ್ದು ಮುಕ್ತಿಗೆ ಪೋದ
ಭಾಗವತ ಜನರ ನಿತ್ಯ ||3||
ಕ್ಷೇತ್ರ ಸರೋವರ ನದಿ ಮಿಗಿಲಾದ ದೇಶದಲಿ
ಪಾತ್ರರಾಗಿದ್ದು ವರ್ಣೋಚಿತ ಧರ್ಮವನು
ಗಾತ್ರ್ರದಂಡಿಸಿ ಮಾಡಿ ಹರಿಯ ಮೆಚ್ಚಿಸುವ ಪಾ
ರತ್ರಯವನೇ ಬಯಸುವ
ಪುತ್ರ ಪೌತ್ರರ ಕೂಡಿ ಜ್ಞಾನದಲಿ ಇಪ್ಪ ಚ
ರಿತ್ರಾರಾ ಮಹಿಮೆ ಕೊಂಡಾಡಿದವರ ವಿ
ಚಿತ್ರವನು ಪೊಗಳುವ ದಾಸದಾಸಿಯರ ಪದ
ಸ್ತೋತ್ರ ಮಾಡಿರೋ ಆವಾಗ ||4||
ಉದಯಕಾಲದಲೆದ್ದು ಸಂತನ ಮಾಲಿಕೆಯನ್ನು
ಮೃದು ಪಂಚರತ್ನದಲಿ ನಿರ್ಮಿತವಾಗಿದೆ
ಸದಮಲರು ಪೇಳಿ ಸಂತೋಷದಲಿ ಕೇಳಿ ಕೊರಲೊಳಗೆ
ಪದರೂಪದಲ್ಲಿ ಧರಿಸಿ
ಮದ ಮತ್ಸರವು ಪೋಗಿ ವೈರಾಗ್ಯದಲಿ ಸಾರ
ಹೃದಯರ ಬಳಿ ಸೇರಿಜ್ಞಾನ ಸಂಪಾದಿಸಿ
ಪದೋಪದಿಗೆ ವಿಜಯವಿಠ್ಠಲನ ನಾಮಾಮೃತವ
ವದನದಿಂದಲಿ ಸವಿದುಂಬ ||5||