ಶಿವಶಿವಾ, ಶ್ರೀಗುರುಲಿಂಗಯ್ಯದೇವರು ತನ್ನ ಕರಸ್ಥಲವ ತಂದು
ಎನ್ನ ಶಿರಸ್ಥಲದ ಮೇಲಿರಿಸಿದ ಬಳಿಕ
ಎನ್ನ ಭವಂ ನಾಸ್ತಿಯಾಯಿತ್ತು.
ಎನ್ನ ತನ್ನಂತೆ ಮಾಡಿದ, ತನ್ನ ಎನ್ನಂತೆ ಮಾಡಿದ ;
ಎನ್ನಲ್ಲಿ ತನ್ನಲ್ಲಿ ತೆರಹಿಲ್ಲದೆ ಮನಕ್ಕೆ ತೋರಿದ.
ತನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು
ಎನ್ನ ಕರಸ್ಥಲದೊಳಗೆ ಮೂರ್ತಿಗೊಳಿಸಿದ.
ಎನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು
ಎನ್ನ ತನುವಿನ ಮೇಲೆ ಮೂರ್ತಿಗೊಳಿಸಿದ.
ಎನ್ನ ತನುವಿನ ಮೇಲಣ ಶಿವಲಿಂಗದೇವರನು
ಎನ್ನ ಮನವೆಂಬ ಮಂಟಪದೊಳಗೆ ಮೂರ್ತಿಗೊಳಿಸದ.
ಎನ್ನ ಮನವೆಂಬ ಮಂಟಪದೊಳಗೆ ಮೂರ್ತಿಗೊಳಿಸಿದ ಶಿವಲಿಂಗದೇವರನು
ಎನ್ನ e್ಞನವೆಂಬ ಮಂಟಪದೊಳಗೆ ಮೂರ್ತಿಗೊಳಿಸಿದ.
ಎನ್ನ e್ಞನವೆಂಬ ಮಂಟಪದೊಳಗಣ ಶಿವಲಿಂಗದೇವರನು
ಮಹಾಘನದಲ್ಲಿ ಮೂರ್ತಿಗೊಳಿಸಿದ.
ಕಬ್ಬಿನ ತನಿರಸವ ಕೊಂಡು ಸಿಪ್ಪೆಯ ಬಿಡುವಂತೆ,
ಮನದ ಮೇಲಣ ಶಿವಲಿಂಗದೇವರಿರಲು
ತನುವಿನ ಮೇಲಣ ಶಿವಲಿಂಗದೇವರು ಹೋಯಿತ್ತೆಂದು
ಆತ್ಮಘಾತವ ಮಾಡಿಕೊಂಬ ಬ್ರಹ್ಮೇತಿ ಸೂನೆಗಾರರ ನೋಡಯ್ಯಾ, ಚೆನ್ನಮಲ್ಲಿಕಾರ್ಜುನಾ.