ವಿಪ್ರವನಿತೆಯಂಕದಲ್ಲಿ
ನಲಿವನಾರು ಬೆಳಕ ಚೆಲ್ಲಿ|
ಧರಿಸಿ ದಿಶೆಯ ಚೆಲುವ ಕುವರ
ಒಲಿದು ಬಂದೆ ಬಡಕುಟೀರ||
ಭೂತಲಕೆ ಇಳಿದು ಬಂದೆ
ಯಾರು ನೀನು ಕಣ್ಮಣಿ|
ಆರ್ತ ಜನರ ತಾಪ ಕಳೆಯೆ
ಸುರಿಸಿ ಕರುಣೆ ಕಂಬನಿ||
ನೊಂದ ಜನಕೆ ನೆರವ ನೀಡೆ
ಬಂದೆಯೇನು ಗೋಪ್ಯವಾಗಿ|
ಕಂದ ಮೊಗದಿ ಕರುಣೆ ತಳೆದು
ಅಳುವೆ ನಗುವೆ ಯಾರಿಗಾಗಿ||
ರೂಪರಾಶಿ ಕಂಡು ನಿನ್ನ
ಸೆಳೆಯಲಾರೆ ನೆಟ್ಟ ಕಣ್ಣ|
ತಾಪತಿಮಿರನಾಶಿ ನಿನ್ನ
ತೋಳಲೆತ್ತಿಕೊಂಬೆ ಚಿನ್ನ||