ವಿದುರನ ಭಾಗ್ಯವಿದು||
ಇದ ಕಂಡು ಜಗವೆಲ್ಲ ತಲೆದೂಗುತಿಹುದು||
ಕುರುರಾಯನು ಖಳನನುಜನು ರವಿಜನು
ಗುರುಗಾಂಗೇಯರು ನೋಡುತಿರೆ|
ಹರಿಸಿ ರಥವನು ಬೀದಿಯಲಿ ಬರುತಲಿಹ
ಹರಿಯನು ಕಂಡನು ಹರುಷದಲಿ||
ದಾರಿಲಿ ಬರುತಿಹ ಮುರವೈರಿಯನು ಕಂಡು
ಹಾರುತ ಚೀರುತ ಕುಣಿಯುತಲಿ|
ಹರುಷದ ಕಂಬನಿ ಧಾರೆಯ ಸುರಿಸುತ
ಬಾರಿಬಾರಿಗು ಸಂತೋಷದಿ ಹಿಗ್ಗುವ||
ಆಟಕೆ ಲೋಕಗಳೆಲ್ಲವ ಸೃಜಿಸುವ
ನಾಟಕಧರ ತನ್ನ ಲೀಲೆಯಲಿ|
ನೀಟಾದವರ ಮನೆಗಳ ಜರಿದು
ಕುಟೀರದಲಿ ಬಂದು ಕುಳಿತ ಹರಿ||
ಅಡಿಗಡಿಗೆ ತನ್ನ ತನುಮನ ಹರಹಿ
ಅಡಿಗೆರಗುತ ಗದ್ಗದ ಸ್ವರದಿ|
ನುಡಿಗಳು ತೊದಲಲು ರೋಮಾಂಚವಾಗಲು
ದುಡುದುಡು ಓಡುತ ದಶದಿಶೆಗೆ||
ಕಂಗಳ ಉದಕದಿ ಪಾದವ ತೊಳೆದು
ಗಂಧವ ಪೂಸಿ ತನು ಮರೆದು|
ಮಂಗಳ ಮಹಿಮನ ಚರಣಕ್ಕೆರಗಿ ಪು-
ಷ್ಪಂಗಳ ಪೂಜೆಯ ಮಾಡಿದನು||
ಕ್ಷೀರವಾರಿಧಿಶಯನಗೆ ಆ ವಿದುರನು
ಕ್ಷೀರವನುಣಬಡಿಸಿದ ಅದನು|
ವಾರಿಜನಾಭನು ಕರಸಂಪುಟದಿ
ಆರೋಗಣಿಸಿದನು ಘನತೆಯಲಿ||
ಒಂದು ಕುಡುತೆ ಹಾಲ ಹರಿಯು ತಾ ಸವಿದು
ಮುಂದಕೆ ಹರಿಸಿದ ಧರೆಯ ಮೇಲೆ|
ಇಂದಿರೆಯರಸನ ಚರಿತೆ ವಿಚಿತ್ರವು
ಚಂದದಿ ಹರಿಯಿತು ಬೀದಿಯಲಿ||
ದೊರೆ ನಿಮ್ಮ ಕರೆಸಿದ ಬರಬೇಕು ಎನ್ನಲು
ಹರಿಯು ನಸುನಗುತಲಿ ಹೊರಟು ನಿಂತ|
ಧರೆಗುಂಗುಷ್ಠವನೂರಲು ರಾಜರು
ಉರುಳಿಬಿದ್ದರು ಶ್ರೀಪಾದದ ಮೇಲೆ||
ಕರುಣಾಕರ ಶ್ರೀಹರಿ ತನ್ನ ಭಕ್ತರ
ನಿರುತದಿ ಪೊರೆವನು ಆಯತದಿ|
ಸಿರಿಯರಸ ನಮ್ಮ ಪುರಂದರವಿಟ್ಠಲನ
ಶರಣರೆ ಧನ್ಯರು ಧರೆಯೊಳಗೊ||
—-ಪುರಂದರದಾಸ