ವಾಣಿಯರಸ ಪರಮೇಷ್ಠಿ ನಿರುತನಿಷ್ಠಿ

ವಾಣಿಯರಸ ಪರಮೇಷ್ಠಿ ನಿರುತನಿಷ್ಠಿ
ಮಾಣದೆ ಕೊಡು ಮನಮುಟ್ಟಿ
ನಾನಾ ನಾಡಿನೊಳು ನೀನೆ ಪಿರಿಯನೆಂದು
ಆನಂದ ಮತಿಯಿಂದ ಗಾನವ ಮಾಡುವೆ

ಪುರುಷನಾಮಕ ವಿಧಾತ ಹಂಸವರೂಥ
ಸರಸಿಜ ಗರ್ಭ ಶಿವತಾತ
ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ
ತಾರತಮ್ಯದೊಳುನ್ನತ
ಹರ ಸಿರಿ ದೇವಿಯ ಚರಣ ರಜವನ್ನು
ಪರಮಾಣು ಪ್ರದೇಶ ವರ ಶಬ್ದ ಪಿಡಿದು
ತರುವಾಯ ಬಹುವಿಧ ಪರಿ ಪರಿಯಿಂದಲಿ
ಸ್ಮರಿಸಿಕೊಳ್ಳುತ ಮೈಮರೆವ ಶತಾನಂದ ||1||

ಜಗವÀ ಪುಟ್ಟಿಸುವ ಮಹಾಧೀರ ತತ್ವಶರೀರ
ಮಗುಳೆ ಅನಿರುದ್ಧಕುಮಾರ
ಝಗಿಝಗಿಪ ಮಕುಟಧರ ಜೀವನೋದ್ಧಾರ
ನಿಗಭಿಮಾನಿ ಚತುರ-ಮೊಗನೆ ಪ್ರಬಲ ಅಹಿಗರುಡಾದ್ಯರಿಗೆಲ್ಲ
ಮಿಗಿಲಾಗಿಪ್ಪನೆ ಅಗಣಿತ ವಾಕ್ಯನೆ
ಹಗಲಿರುಳು ಮನಸಿಗೆ ಸುಖವಾಗುವ
ಬಗೆ ಕರುಣಿಸು ನಮ್ಹಗೆಗಳ ಕಳೆದು ||2||

ವಾರಿಜಾಸನ ಲೋಕೇಶ ಭಕುತಿವಿಲಾಸ
ಚಾರುಸತ್ಯ ಲೋಕಾಧೀಶ
ಸಾರಹೃದಯ ವಿಶೇಷ ಮಹಿಮನೆ ದೋಷ
ದೂರ ನಿರ್ಮಲ ಪ್ರಕಾಶ
ಧಾರುಣಿಯೊಳಗವತಾರ ಮಾಡದ ದೇವ
ಸಾರಿದೆ ನಿನ್ನಂಘ್ರಿವಾರಿಜಯುಗಳವ
ಸಾರಿಸಾರಿ ವಿಜಯವಿಠ್ಠಲನ್ನ
ಆರಾಧಿಪುದಕೆ ಚಾರುಮತಿಯ ಕೊಡು ||3||

Leave a Comment

Your email address will not be published. Required fields are marked *