ಯಾರನು ಬಯಸಿ ಶ್ರೀಭುವನೇಶ್ವರಿ
ಹರಕೆಯ ಹೊತ್ತಳೊ ವೀರೇಶ್ವರನಲಿ
ವೀರೇಶ್ವರ ಶಿವ ಯಾವನ ರೂಪದಿ
ಧರೆಯನು ಪಾವನಗೈದನೊ ಅಂತಹ
ವೀರ ವಿವೇಕಾನಂದ ನಮೋ||
ಯಾವನ ಲೀಲೆಯ ಸಹಿಸದೆ ಮಾತೆಯು
‘ಶಿವನೇ ನೀ ಬಾರೆನ್ನುತ ಮೊರೆಯಿಡೆ
ಇವನನು ಏತಕೆ ಕಳುಹಿದೆ?’ ಎನ್ನುತ
ಯಾವನ ಹಂಗಿಸುತಿದ್ದಳೊ ಅಂತಹ
ವೀರ ವಿವೇಕಾನಂದ ನಮೋ||
‘ಇರುವನೊ ದೇವರು? ಇಲ್ಲವೊ?’ ಎನ್ನುತ
ಗುರುವನು ಭರದಿಂ ಪ್ರಶ್ನಿಸಿ ಕೂಡಲೆ
‘ಇರುವನು ತೋರುವೆ ನಿನಗೂ!’ ಎನ್ನುವ
ಮರುದನಿಯಿಂದ ಚಕಿತನಾದಂತಹ
ವೀರ ವಿವೇಕಾನಂದ ನಮೋ||
ರಾಮಕೃಷ್ಣರಲಿ ಸೇವಾವೃತ್ತಿಯ
ಪ್ರೇಮದಿ ಮಾಡುತ ಸಾಧನೆಗೈಯುತ
ಬ್ರಹ್ಮದ ಅನುಭವ ಬೇಗನೆ ಪಡೆಯುತ
ಕಾಮಿನಿ-ಕಾಂಚನ-ಬಂಧನ ನೀಗಿದ
ವೀರ ವಿವೇಕಾನಂದ ನಮೋ||
ಗುರುವಿನ ಪ್ರಸ್ಥಾನಾನಂತರದಲಿ
ವಿರಾಗ ಪಡೆಯುತ ಕಾವಿಯ ಧರಿಸುತ
ಭಾರತ ಭುವಿಯಲಿ ಸುತ್ತುತ ತಿರುಗುತ
ವಿರಸವ ವೀಕ್ಷಿಸಿ ದುಃಖಿಸಿದಂತಹ
ವೀರ ವಿವೇಕಾನಂದ ನಮೋ||
ದೇಶವಿದೇಶದಿ ವೇದದ ತತ್ತ್ವವ
ಪ್ರಸಾರ ಮಾಡುತ ಸರ್ವರ ಹೃದಯದಿ
ಈಶಪ್ರೇಮವ ಮೊಳೆಯಿಸಿ ಬೆಳೆಯಿಸಿ
ಶ್ರೀಶನ ಚರಣದಿ ಲಯವಾದಂತಹ
ವೀರ ವಿವೇಕಾನಂದ ನಮೋ||
—-ಸ್ವಾಮಿ ಹರ್ಷಾನಂದ