ನಿನ್ನ ನೋಡಲಿ ಬಂದೆ ನಿತ್ಯ ತೃಪ್ತಾ
ಅನ್ಯರಿಂದಲಿ ಎನಗೆ ಏನು ಪ್ರಯೋಜನವೊ
ದರುಶನಕೆ ಬಂದವ ನಾನಲ್ಲವೆಂದು ನಾನಂದು
ಹರಿ ನಿನಗೆ ನುಡಿದದ್ದು ಮನಸ್ಸಿನೊಳಗೆ
ಇರುತಿಪ್ಪದೇನಯ್ಯಾ ಬಿನ್ನಪವೆ ಲಾಲಿಸು
ಶರಣ ಜನರ ಅಭಿಪ್ರಾಯವೊಂದು ಬಗೆ ಇಪ್ಪದೊ||1||
ನಿರುತ ವ್ಯಾಪ್ತತ್ವ ಕರುಣತ್ವ ಅಣುಮಹತ್ತು
ಸರುವ ಚೇತನ ಜಡ ಮತ್ತೆ ಮತ್ತೆ
ಪರಿ ಪರಿಯಿಂದಲಿ ನಿನ್ನಲಿ ಉಂಟು ನಿನ್ನ
ವರ ಮೂರ್ತಿಗಳ ಪೇಳದೆ ಇದಷ್ಟು ವಿನಯದಲಿ ||2||
ಧ್ಯಾನಕ್ಕೆ ನೀನು ಪ್ರಧಾನನೆಂದು ನುಡಿದೆ
ಆನಂದಮತಿ ಕೊಡುವ ಅಪ್ರಮೇಯ
ಕ್ಷೋಣಿಜನಕಿಂತ ದ್ವಾರದವರು ವೆಗ್ಗಳವಾಗೆ
ಏನೆಂಬೆ ತಿರುವೇಂಗಳೇಶ ನಿನ್ನಾಟಕ್ಕೆ ||3||
ಮಿಕ್ಕ ಮಂದಜನಕೆ ನಿನ್ನ ಭಕುತರ ಮೇಲೆ
ಭಕುತಿ ಪುಟ್ಟುವುದಕ್ಕೆ ನಾ ಪೇಳಿದದ್ದು
ಅಕಟಕಟ ನಿನ್ನ ದೊರೆತನಕೆ ಏನೆಂಬೆ
ತಕ್ಕ ಮಾತುಗಳೇನೊ ಆಲೋಚಿಸಿ ನೋಡೆ ||4||
ಹೊನ್ನು ಹಣ ತೂಗಬೇಕಾದರೆ ಮೊದಲಿಗೆ
ಚಿನ್ನ ಹಾಕುವರೇನೊ ಚಿನ್ಮಯರೂಪ
ಮುನ್ನೆ ನಿನ್ನವರ ದರುಶನವಾದ ಮೇಲೆ ಪಾ
ವನ್ನ ಶಾರೀರನೆ ನಿನ್ನ ಕಾಂಬುವದುಚಿತ ||5||
ಜರೆಮರಣರಹಿತ ಸುಜನರ ಪರಿಪಾಲಾ ನಿ
ರ್ಜರÀಗಣಕೆ ನಿತ್ಯ ವಜ್ರಪಂಜರಾ
ಜರಗೆ ವರವಿತ್ತ ದನುಜರ ವಂಶನಾಶಾ ನಿ
ರ್ಜರ ನದಿ ಜನಕಾಂಬುಜ ರವಿ ನಯನ ದೇವಾ ||6||
ಸ್ಥೂಲಮತಿಯಿಂದ ಪೇಳಿದೆನೆಂದು ಚನ್ನಾಗಿ
ಲಾಲಿಸು ಲಲಿತಾಂಗಿ ಲಕುಮಿ ರಮಣಾ
ನೀಲಗಿರಿ ನಿವಾಸ ವಿಜಯವಿಠ್ಠಲ ವೆಂಕಟವಾಲಗವ
ಕೈಗೊಳ್ಳು ಎನ್ನ ಯೋಗ್ಗಿತವರಿತು||7||