ನಾಮತ್ರಯ ನೆನೆಯಿರೊ
ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು
ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ
ದುಶ್ಚರಿತವೆಂಬ ಮಹ ಕಾನನಕ್ಕೆ
ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ
ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು||1||
ಅನಂತ ಅನಂತ ಎಂದು ಮನದಲ್ಲಿ ನೆನೆಯೆ
ನಾನಾ ಭವಬಂಧ ದುಷ್ಕರ್ಮದಿ
ಹೀನಾಯವನು ಕಳೆದು ಹಿತದಿಂದಲಿ ವೊಲಿದು
ಆನಂದ ಆನಂದವಾದ ಫಲ ಕೊಡುವುದು. ||2||
ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ
ಗೋವಿಂದ ಕಡೆಹಾಕಿ ಸಾಕುವದು
ದೇವೇಶ ಶಿರಪತಿ ವಿಜಯವಿಠ್ಠಲೇಶನ
ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು ||3||