ನಮೋ ನಮೋ ಶ್ರೀ ಮಧ್ವರಾಯ ಸುರಮುನಿಗೇಯ
ನಮೋ ನಮೋ ಶ್ರೀ ಮಧ್ವಾಚಾರ್ಯ ಆರ್ಯಾ
ಭೃಗು ಕುಲೋತ್ತಮ ರಾಮ ಭೂಸುರರಿಗೆ ಸರ್ವ
ಜಗವೆಲ್ಲ ಧಾರಿಯನು ಯೆರದು ಸಂಹ್ಯಾ
ನಗದಲ್ಲಿ ನಿಂದು ಸಮುದ್ರನ್ನ ಹಿಂದಕ್ಕೆ ತೆಗಿಸಿ
ಈ ಭೂಮಿಯನು ಸಾಧಿಸಿದನು||1||
ಅತಿ ದಯಾಪರ ಮೂರ್ತಿ ಅಲ್ಲಿಗಲ್ಲಿಗೆ ಕ್ಷೇತ್ರ
ಗತಿ ತಪ್ಪಿದಂತೆ ನಿರ್ಮಾಣ ಮಾಡಿ
ಸತಿಪತಿಯ ಉದ್ಧರಿಸಿ ಬರುತ ಕಂಡನು ಉ
ನ್ನತವಾದ ಪರ್ವತವು ಯೋಜನವಿರೆ ||2||
ಬೆರಗಾಗಿ ಪರಶುರಾಮನು ಬಂದು ಈ
ಗಿರಿಯಲ್ಲಿ ನಿಂದು ಅಗ್ರಭಾಗವೈದೆ
ತರಹರಿಸಲಾರದೇ ಭೂಮಿಗಿಳಿಯಿತು ಅದ್ರಿ
ನಿರೀಕ್ಷಿಸಿ ಸುಜನರು ಇದ್ದನಿತು||3||
ಸಿರಿರೂಪ ದುರ್ಗಾನಾಮಕಳಾದ ದೇವಿಯನು
ಕರದು ಈ ಸ್ಥಾನದಲಿ ಇರ ಹೇಳಿದಾ
ಅರವು ಮಾಡದೆ ಮುಂದೆ ಕಲಿಯುಗದಲಿ ನೆರದು
ದುರುಳರಾತಿಯರ ಸಂಹರಿಸುಯೆಂದು ||4||
ಅನಿತರೊಳಾಕಾಶದಲಿ ಜಯ ಜಯವೆಂದು
ಅನಿಮಿಷರು ಕೊಂಡಾಡಿ ನಗುತ ದಿವ್ಯ
ಮಣಿಮಯ ವಿಮಾನದಿಂದಾ ಗಿರಿಗೆ ವೇಗದಿ ಸು
ಮ್ಮನರಾಗಿ ಬಂದು ತುತಿಸಿದರು ಹರಿಯಾ ||5||
ಅಂದಿನಾರಭ್ಯವಾಗಿ ಇದೇ ವಿಮಾನಗಿರಿ
ಯೆಂದು ಕರೆಸಿತು ಶ್ರುತಿ ಯುಕ್ತಿಯಲ್ಲಿ
ಎಂದೆಂದಿಗೆ ಇದನೆ ನೋಡಿದವರಿಗೆ ದೋಷ
ಗಂಧವಾದರು ಇಲ್ಲಾ ಇಲ್ಲ ಇಲ್ಲಾ||6||
ಈ ಮಹಿಮೆಯನು ಕೇಳಿ ಧರ್ಮ ತಪವನು ಮಾಡಿ
ಭೂಮಿಯೊಳಗೆ ಎನ್ನ ವಂಶಸ್ಥನು
ಸೋಮಾರ್ಕ ಪ್ರಭಯಂತೆ ಕೀರ್ತಿಯನು ಪಸರಿಸಿ
ಪಾಮರರ ಉದ್ಧರಿಸಬೇಕು ಯೆಂದು||7||
ಈ ಪರಿ ಶ್ರೀಹರಿಯ ಧ್ಯಾನವನು ಮಾಡಲು
ಶ್ರೀಪತಿ ವರವಿತ್ತ ಮುಂದೆ ಮಹ
ಪಾಪಿ ಪುಟ್ಟುವನು ಅವನಗೋಸುಗ ವಾಯು
ತಾ ಪರಮ ಪ್ರೀತಿಯಲಿ ಜನಿಸುವನು ||8||
ಅಂದ ಮಾತಿಗೆ ಯಮನು ಬಹುಕಾಲದಲಿದ್ದ
ಛಂದದಿಂದದಿ ಪೋದ ತನ್ನ ಪುರಕೆ
ಇಂದಿರಾಪತಿ ನೇಮಿಸಿದ ಪರಿಯಂತೆ ಆ
ನಂದತೀರ್ಥರಾಗಿ ಜನಿಸಿದರು ||9||
ಏನು ಪೇಳಲಿ ಪುಣ್ಯ ಚರಿತಯನು ಚನ್ನಾಗಿ
ಇಂತು ಹೇಳಿದ ಪ್ರಕಾರದಲಿ ಹೇಳಿ ಕೇಳೆ
e್ಞÁನದಲಿ ಅಧಿಕಾರಾಗಿ ಇಷ್ಟಾನಿಷ್ಟ ಪುಣ್ಯ
ಮಾನದಲಿ ಕೊಂಡಾಡಿ ಸುಖಿಪರಲ್ಲಿ||10||
ಹುರಳಿ ಗುಗ್ಗರಿ ಮೆದ್ದ ಅದ್ಧುತವ ಕೇಳಿದರೆ
ಉರಳಿ ಹೋಗುವದು ಜನ್ಮಾಂತರದ ದುಷ್ಕರ್ಮ
ಮರಳಿ ಬಲಿ ಬಾಲವನು ಪಿಡಿದದು ನೆನಸಿದರೆ
ನೆರಳಾಗುವರು ಸುರರು ಮುಕ್ತಿಯಿನಿತ್ತು ||11||
ಧರಣಿಧರದಿಂದ ಧುಮುಕಿದ ಪಾದಯುಗ ನೋಡೆ
ಎರಡೊಂದು ಏಳು ಕುಲತೃಪ್ತರಹರೊ
ಅರೆ ಮ್ಯಾಲೆ ಸಾಲವನು ತಿದ್ದಿದಾ ವಾರ್ತಿ ಕೇಳಿ
ಎರಡೊಂದು ಋಣದಿಂದ ಕಡೆಗಾಗುವ ||12||
ತಲೆಕೆಳಕಾಗಿ ಬೆಳೆದಾ ವೃಕ್ಷವನು ನೋಡಿ
ಬಲಿವನು ಸುರದ್ರುಮದಂತೆ ರಂಗ
ಛಲದಿಂದ ಸರ್ಪನ ವರಸಿದ ಸ್ಥಳ ಕಾಣೆ
ಬಲು ವಿಷಗಳು ಪೋಗಿ ನಿರ್ಮಲಹರೋ ||13||
ಧೂಳಿ ಅಕ್ಷರ ಬರೆದ ಪ್ರದೇಶ ನೋಡಲು
ವಾಲಯಾ ಶುಭವಿದ್ಯ ಫಲಿಸುವದು
ಲೀಲೆಯಿಂದ ಗ್ರಂಥ ಅಭ್ಯಾಸಕೆ ಪೋಗಿ ಬರುವ
ಶೀಲತೆಯು ಕೇಳೆ ಮನೋ ವಾಯುವೇಗ ||14||
ಬುತ್ತಿಯ ಉಂಡ ಸ್ಥಳವನ್ನು ಕೊಂಡಾಡಲು
ತೃಪ್ತನಾಗುವ ಮನುಜ ಮೃಷ್ಟಾನ್ನದಿ
ನಿತ್ಯ ಬಾಲಕ್ರೀಡೆ ಆಡಿದ್ದು ಪಾಡಲು
ಪುತ್ರೋತ್ಸವಗಳಿಂದ ಬಾಳುತಿಪ್ಪ||15||
ಶರ ಚಾಪ ಗದ ಪದುಮ ಎರಡೊಂದು ತೀರ್ಥಗಳು
ಇರುತಿಪ್ಪ ವಾಸುದೇವನೆಂಬೊ ನಾಮಾ
ಸರೋವರದಲಿ ಮಿಂದು ಸ್ತೋತ್ರ ಮಾಡಿದ ನರಗೆ
ವಿರಜೆಯಲಿ ಸ್ನಾನ ಸಂದೇಹವಿಲ್ಲ ||16||
ಜನಿಸಿ ಮೊದಲು ಮಹಾ ಬದರಿಗೆ ಪೋದಾರಭ್ಯ
ಎಣಿಕೆ ಇಲ್ಲದೆ ಚರಿತೆ ಅನುದಿನದಲಿ
ಗುಣಿಸಿ ಗುಣದಲಿ ತಿಳಿದು ಕೀರ್ತನೆಯನೆಸಗಿದಾ
ಮನುಜರಿಗೆ ಸತ್ಕೀರ್ತಿ ಬರುವುದಯ್ಯಾ ||17||
ಮಧ್ವ ಮಧ್ವ ಎಂಬೋ ನಾಮವನು ನುಡಿದರೆ
ಬದ್ಧವಾಗಿದ್ದ ಭವಾಬ್ಧಿಯಿಂದ
ಎದ್ದು ಕಡಿಗೆ ಬಿದ್ದು ಸಂಚಿತಾಗಾಮಿಯಿಂದ
ಗೆದ್ದು ಚರ್ಮ ದೇಹದಿಂದ ನಲಿವ ||18||
ಶ್ರೀ ಪೂರ್ಣಬೋಧ ಗುರುಶೇಖರ ಸುಗುಣಧಾಮ
ಆಪನ್ನ ಪರಿಪಾಲ ಅಮೃತಫಲದ
ವ್ಯಾಪುತ ನಾನಾ ಸ್ಥಾನ ಹನುಮ ಭೀಮ ಸರ್ವ
ರೂಪಾತ್ಮಕ ಪ್ರಾಣ ಭಾರತೀಶ||19||
ಕೇಳಿ ಹರುಷಿತನಾಗಿ ಬಂದ ವೈಭವದಂತೆ
ಕಾಲ ಹಿಂಗಳಿಯದೇ ನಿತ್ಯದಲ್ಲಿ
ಲೀಲೆಯಲಿ ವಾಸವಾಗಿರಲೆಂದು ಅಂದು
ಪೇಳಲಾ ಮೌಳಿಯನು ತೂಗಿ ಸರ್ವರು ನಿಂತರು||20||
ಪುಂಜಕಾಸ್ಥಳ ಬಂದು ತಪವು ಮಾಡಲು ಕ್ಷೇತ್ರ
ರಂಜನವಾಯಿತು ಇದೇ ನಾಮದಲ್ಲಿ
ಕುಂಜರ ವರದ ನಮ್ಮ ವಿಜಯವಿಠ್ಠಲನಂಘ್ರಿ
ಕಂಜವನು ಭಜಿತ ಗುರುರಾಜ ಜಯತು ||21||