ದುರ್ಲಭ ಇದು ಕಲಿಯುಗದೊಳಗೆ ಕಾಣಾ

ದುರ್ಲಭ ಇದು ಕಲಿಯುಗದೊಳಗೆ ಕಾಣಾ
ಎಲ್ಲರಿಗೆ ದೊರಕಬಲ್ಲದೆ ಶ್ರೀ
ವಲ್ಲಭನ ಪಾದಸೇವೆ ಮಾಡೋ ನೀ
ನಲಿದಾಡೋ ಎಲೆ ಮನುಜಾ

ಸುರನರ ಉರಗರು ಕಿಂನರಕಿಂಪುರುಷರು
ಗಂಧರ್ವರು ಸಿದ್ಧರು ವಿದ್ಯಾ
ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು
ಹರಿ ಸರಸಿಜ ಸಂಭವ ಪುರಹರ ಮೂವನ ಬಲ್ಲಿದರೀ
ದರಿಯೊಳು ಇದರಲಿ ಹರಿ ಭಕುತಿಗೆ ಸರಿ
ಇಲ್ಲವೆನುತಲಿ ಬರಿದು ರೇಖೆಯ
ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ ||1||

ಹರಿಯೆಂತೆಂದವ ಧರ್ಮಕೆ ಸಂದವ
ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ
ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ
ಹರಿಹರಿದಾಡುತ ಕುಣಿದವ ಉತ್ತಮ ಗುಣದವ
ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ
ತಿರುಹುತ ಅಭಿನವ ನೋಡೊ
ಮಾಯವ ಬಿಡೋ ಎಲೆ ಮನುಜಾ||2||

ತಂಬೂರಿ ತಂತಿಯಾ ಮೀಟಿದವ ಭವಾಬ್ಧಿ ದಾಟಿದವ
ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ
ಸಂಭ್ರಮ ತಾಳ ಕಟದವ ಊಟದವ ಸುರರೊಡನೆ
ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ
ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ
ಅಂಬುಜಾಕ್ಷನ ಮಹಿಮೆಯ ಕೇಳೋ
ನೀ ಸುಖದಲಿ ಬಾಳೊ ಎಲೆ ಮನುಜಾ ||3||

ದಾಸರ ಕೀರ್ತನೆ ಒಂದು ಸುಳಾದಿಯ
ಬೇಸರದಲೆ ಹೇಳಿ ಏಕಾದಶಿಯ
ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು
ಸಾಸಿರ ಜನ್ಮದ ಕುಲಕೋಟಿಯ ಶ್ರೀನಿವಾಸನ
ಚರಣಕೆ ಏರಿಸಿದನಿವ
ಏಸು ವ್ರತಗಳು ಬಿಡಬಿಡು ಜರಿದು ಹರಿದಾಸರ ಸಂಗತಿ
ಬೆರೆದು ಎಲೆ ಮನುಜಾ||4||

ಈ ಪರಿಯಿಂದಲಿ ಸೇವಿಸಿ ಉಪಾದಾನ
ಗೋಪಾಳವನು ಬೇಡಿ ನಿತ್ಯಸುಖಿಯಾಗಿ
ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ
ಶ್ರೀಪತಿ ಸಿರಿ ವಿಜಯವಿಠ್ಠಲನ ಪದ
ಪದ್ಮವ ಪೊಂದಿದ ಭಜಕರು
ಕಾಪುರುಷರಿಗೆ ವಿಶೇಷರು ಕಾಣೊ ಮುಕ್ತಿ
ಒಂದೇ ಗೇಣೊ ಎಲೆ ಮನುಜಾ ||5||

Leave a Comment

Your email address will not be published. Required fields are marked *